ಉಪ್ಪಿನಂಗಡಿ: ರಸ್ತೆ ಬದಿಯಿದ್ದ ಜೆಜೆಎಂನ ಕಪ್ಪು ಪೈಪನ್ನು ಮಹಾಶಿವರಾತ್ರಿಯಂದು ಯಾರೋ ಕಿಡಿಗೇಡಿಗಳು ರಸ್ತೆಗೆ ಅಡ್ಡವಾಗಿಟ್ಟಿದ್ದು ಇದಕ್ಕೆ ಬೈಕ್ ಡಿಕ್ಕಿಯಾಗಿ ಪತ್ರಿಕಾ ವಿತರಕ ಗಾಯಗೊಂಡ ಘಟನೆ ಫೆ.27ರಂದು ಮುಂಜಾನೆ4.30ಕ್ಕೆ ಹಿರೇಬಂಡಾಡಿ ಗ್ರಾಮದ ಪಟಾರ್ತಿ ಎಂಬಲ್ಲಿ ನಡೆದಿದೆ.

ಹಿರೇಬಂಡಾಡಿ ಗ್ರಾಮದ ಸರೋಳಿ ನಿವಾಸಿ ರೋಹಿತಾಕ್ಷ ಗಾಯಗೊಂಡವರಾಗಿದ್ದು, ಇವರು ಉಪ್ಪಿನಂಗಡಿ-ಹಿರೇಬಂಡಾಡಿ ಲೈನ್ನಲ್ಲಿ ಸುದ್ದಿಬಿಡುಗಡೆ ಪತ್ರಿಕೆ ವಿತರಣೆ ಕೆಲಸ ಮಾಡಿಕೊಂಡಿದ್ದಾರೆ. ಎಂದಿನಂತೆ ಫೆ.27ರಂದು ಬೆಳಿಗ್ಗೆ 4.30ಕ್ಕೆ ತನ್ನ ಬೈಕ್ನಲ್ಲಿ ಮನೆಯಿಂದ ಉಪ್ಪಿನಂಗಡಿಗೆ ಹಿರೇಬಂಡಾಡಿ-ಉಪ್ಪಿನಂಗಡಿ ಮಾರ್ಗದಲ್ಲಿ ಹೋಗುತ್ತಿದ್ದ ವೇಳೆ ಹಿರೇಬಂಡಾಡಿ ಗ್ರಾಮದ ಪಟಾರ್ತಿ ಎಂಬಲ್ಲಿ ರಸ್ತೆ ಬದಿ ಇದ್ದ ಜೆಜೆಎಂ ಪೈಪುಗಳನ್ನು ಯಾರೋ ಕಿಡಿಗೇಡಿಗಳು ರಸ್ತೆಗೆ ಅಡ್ಡವಾಗಿಟ್ಟಿರುವುದು ಅರಿವಿಗೆ ಬಾರದೇ ಪೈಪ್ಗೆ ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಘಟನೆಯಿಂದ ರೋಹಿತಾಕ್ಷ ಅವರ ಕೈ, ಕಾಲು, ಭುಜಕ್ಕೆ ಗುದ್ದಿದ ಗಾಯವಾಗಿದೆ. ಅಲ್ಲದೇ ಈ ರಸ್ತೆಯ ಹಲವು ಕಡೆಗಳಲ್ಲಿ ಮೋರಿಗೆ ಅಳವಡಿಸಲು ತಂದು ಹಾಕಿದ್ದ ದೊಡ್ಡ ದೊಡ್ಡ ಗಾತ್ರದ ಸಿಮೆಂಟ್ ಪೈಪ್ಗಳನ್ನು ಯಾರೋ ಕಿಡಿಗೇಡಿಗಳು ರಸ್ತೆಗೆ ಅಡ್ಡವಾಗಿಟ್ಟು ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ರೋಹಿತಾಕ್ಷ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಕೃತ್ಯ ಎಸಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.