ಗ್ಯಾರಂಟಿ ಮುಖ್ಯಸ್ಥರಿಗೆ ಸ್ಥಾನಮಾನ ವಿಚಾರ – ಅಹಿತಕರ ವಿದ್ಯಮಾನ- ಸರಕಾರಕ್ಕೆ ಹೈಕೋರ್ಟ್ ನೊಟೀಸ್

0

ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಪಿ. ರಾಜೀವ್ ಪರ ಹಿರಿಯ‌ ನ್ಯಾಯವಾದಿ ಅರುಣ್ ಶ್ಯಾಮ್ ವಾದ

ಪುತ್ತೂರು: ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಅರ್ಜಿಯಲ್ಲಿ ವಿವರಿಸಲಾದ ವಿಚಾರಗಳು ಅಹಿತಕರ ವಿದ್ಯಮಾನಗಳನ್ನು ಸೂಚಿಸುತ್ತವೆ ಎಂದು ಮೌಖಿಕವಾಗಿ ಹೇಳಿದೆ.
ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಉಪಾಧ್ಯಕ್ಷರನ್ನಾಗಿ ಪುಷ್ಪಾ ಅಮರನಾಥ್, ಎಸ್.ಆರ್. ಪಾಟೀಲ್ ಬ್ಯಾಡಗಿ, ಮೆಹರಾಜ್ ಖಾನ್ ಮತ್ತು ಸೂರಜ್ ಹೆಗ್ಡೆ ನೇಮಕ ಪ್ರಶ್ನಿಸಿ ಬಿಜೆಪಿಯ ಮಾಜಿ ಶಾಸಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ವಾದ ಆಲಿಸಿದ ನ್ಯಾಯಪೀಠ ‘ಸರಕಾರ ಹೊರಡಿಸಿರುವ ಆಕ್ಷೇಪಾರ್ಹವಾದ ಆದೇಶ, ಅಧಿಸೂಚನೆ ಮತ್ತು ಅರ್ಜಿಯಲ್ಲಿನ ವಿವರಣೆ ನೋಡಿದಾಗ ಮೇಲ್ನೋಟಕ್ಕೆ ಅರ್ಜಿದಾರರ ಅಂತಿಮ ವಿಶ್ಲೇಷಣೆಯು ಅವರ ಪ್ರಕರಣದಲ್ಲಿ ಸತ್ಯ ಎನಿಸಿದ್ದು ಇದು ರಾಜ್ಯ ಸರಕಾರ ತೆಗೆದುಕೊಳ್ಳುವ ನಿಲುವಿಗೆ ಒಳಪಟ್ಟಿರುತ್ತದೆ. ಈ ನೆಲೆಯಲ್ಲಿ ರಾಜ್ಯ ಸರಕಾರದಿಂದ ನ್ಯಾಯಾಲಯ ಆಕ್ಷೇಪಣೆ ಬಯಸುತ್ತಿದ್ದು ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.

ಅರುಣ್ ಶ್ಯಾಮ್ ವಾದ:
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್ ಪುತ್ತೂರು ಅವರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದ್ದು ಉಪಾಧ್ಯಕ್ಷರಿಗೆ ರಾಜ್ಯ ಸ್ಥಾನಮಾನ ನೀಡಲಾಗಿದೆ.
ಅನುಷ್ಠಾನ ಸಮಿತಿಗೆ ನೇಮಕವಾಗಿರುವವರು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾಗಿದ್ದಾರೆ. ನೇಮಕಗೊಂಡಿರುವವರಿಗೆ ಸಂಪುಟ ದರ್ಜೆ ಮತ್ತು ರಾಜ್ಯ ಸಚಿವರಿಗೆ ದೊರೆಯುವ ವೇತನ, ಸೌಲಭ್ಯ ಕಲ್ಪಿಸಲಾಗಿದೆ. ನೇಮಕಗೊಂಡಿರುವವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಕಾರ್ಯಾಂಗಕ್ಕೆ ನಿರ್ದೇಶನ ನೀಡುತ್ತಿದ್ದಾರೆ‌ ಎಂದರು. ಅಲ್ಲದೆ, ನೇಮಕಗೊಂಡಿರುವವರ ಶೈಕ್ಷಣಿಕ ಅರ್ಹತೆ ಗಮನಿಸಿದರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಅಷ್ಟು ಮಾತ್ರವಲ್ಲದೆ, ಜಿಲ್ಲಾ ಮತ್ತು ತಾಲೂಕು ಮಟ್ಟ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅರುಣ್ ಶ್ಯಾಮ್ ಆಕ್ಷೇಪಿಸಿದರು.

LEAVE A REPLY

Please enter your comment!
Please enter your name here