ಕಡಬ: ಸವಣೂರು ಗ್ರಾಮ ಪಂಚಾಯತ್ ನಲ್ಲಿ 2024-25 ನೇ ಸಾಲಿನ ವಿಶೇಷಚೇತನರ ಸಮನ್ವಯ ಮತ್ತು ಮಹಿಳಾ ಸಬಲೀಕರಣ ಅಭಿಯಾನದಡಿ ಮಹಿಳಾ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಸುಂದರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಆರತಿ, ಮಹಿಳೆಯರಿಗೆ ಸ್ವತಂತ್ರ ಬದುಕು ಸಾಗಿಸಲು ನೆರವಾಗುವುದರ ಜೊತೆಗೆ ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿಸುವ ಗುರಿಯನ್ನು ಸರಕಾರ ಹೊಂದಿದ್ದು, ಕಾನೂನು ನೆರವು, ಆರ್ಥಿಕ ಪರಿಹಾರ, ಮಹಿಳಾ ಸಹಾಯವಾಣಿಯ ಮೂಲಕ ಸಂಕಷ್ಟಕ್ಕೊಳಗಾದ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸುತ್ತದೆ ಎಂದು ಹೇಳಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ವಿಶೇಷಚೇತನ ಇಲಾಖೆಯ ಸಂಪನ್ಮೂಲ ವ್ಯಕ್ತಿ ಬಿಳಿನೆಲೆ ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಜಯ್ ಕುಮಾರ್ ವಿಶೇಷಚೇತನರಿಗೆ ಸರಕಾರದಿಂದ ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ದೊರೆಯುವ ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಿಶೇಷಚೇತನ ವ್ಯಕ್ತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ವಿವಾಹ ಪ್ರೋತ್ಸಾಹಧನ ಯೋಜನೆ, ವಿಶೇಷಚೇತನ ಆರೈಕೆದಾರರಿಗೆ ಮಾಸಿಕ ಪ್ರೋತ್ಸಾಹಧನ, ನಿರಾಮಯ ಆರೋಗ್ಯ ವಿಮಾ ಯೋಜನೆ, ಸ್ವ ಉದ್ಯೋಗ ಮಾಡಲು ಆಧಾರ ಯೋಜನೆ, ಉಚಿತ ಸಾಧನ ಸಲಕರಣೆಗಳ ಯೋಜನೆ ಕುರಿತು ಮಾಹಿತಿ ನೀಡಿದರು.
ಪುತ್ತೂರು ಆಮೂಲ್ಯ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ವಿಜಯ್ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿ ಚಿದಾನಂದ.ಎಸ್ ಸ್ವ-ಉದ್ಯೋಗ ಮಾಡುವ ವಿಶೇಷಚೇತನರಿಗೆ ಸಬ್ಸಿಡಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ನಿಲಯದ ಶಿಕ್ಷಕಿ ಶಶಿಕಲಾ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ವಸಂತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರೋಗ್ಯ ಸಮುದಾಯ ಸುರಕ್ಷಾಧಿಕಾರಿ ಸುಶ್ಮಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ವಿಶೇಷಚೇತನರು, ಪೋಷಕರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪುಣ್ಚಪ್ಪಾಡಿ ಪ್ರಾಥಮಿಕ ಶಾಲೆಯ ಮಕ್ಕಳು, ಸವಣೂರು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ದೀಪಿಕಾ, ಪೆರಾಬೆ ಗ್ರಾಮ ಪಂಚಾಯತ್ ನ ಗ್ರಾಮೀಣ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಬಿ, ಬೆಳಂದೂರು ಗ್ರಾಮ ಪಂಚಾಯತ್ ನ ಪ್ರಶಾಂತಿ, ಆಲಂಕಾರು ಗ್ರಾಮ ಪಂಚಾಯತ್ ನ ಮೋನಪ್ಪ ಬಿ, ಪಂಚಾಯತ್ ಸಿಬ್ಬಂದಿಗಳಾದ ಜಯಶ್ರಿ,ದಯಾನಂದ, ಯತೀಶ್ ಸಭೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ವಸಂತ ಶೆಟ್ಟಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಪಂಚಾಯತ್ ಸಿಬ್ಬಂದಿ ಪ್ರಮೋದ್ ಧನ್ಯವಾದ ಸಲ್ಲಿಸಿದರು.