ಕುಂತೂರು ಶ್ರೀ ಶಾರದಾ ಶಿಶು ಮಂದಿರದಲ್ಲಿ ಸಂಭ್ರಮದ ಶಿಶು ಸಂಭ್ರಮ 2025: ಸಾಮೂಹಿಕ ಹುಟ್ಟುಹಬ್ಬ ಆಚರಿಸಿಕೊಂಡ ಪುಟಾಣಿಗಳು

0

ಕುಂತೂರು: ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ, ಪುಟಾಣಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುವ ಕುಂತೂರು ಶ್ರೀ ಶಾರದಾ ಶಿಶು ಮಂದಿರದಲ್ಲಿ ಮಾರ್ಚ್ 1 ರಂದು ಶಿಶು ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ S.S.P.U ಕಾಲೇಜು ಸುಬ್ರಹ್ಮಣ್ಯದ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಮಾತನಾಡಿ ಹಿಂದಿನ ಕಾಲದ ಸಂಸ್ಕಾರಕ್ಕೂ ಈಗಿನ ಕಾಲದ ಸಂಸ್ಕಾರಕ್ಕೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿದರು. ‘ನಾನು ನನ್ನ ಬಾಲ್ಯದಿಂದ ಇಲ್ಲಿಯವರೆಗೂ ಕೂಡು ಕುಟುಂಬದಲ್ಲಿ ಬದುಕುತ್ತಿದ್ದೇನೆ. ಹಾಗಾಗಿ ನನ್ನ ಜೀವನದಲ್ಲಿ ಈಗಲೂ ಮೌಲ್ಯಯುತವಾದ ಸಂಸ್ಕಾರವನ್ನು ಹೊಂದಿದ್ದೇನೆ. ಈಗಿನ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಕೊಡುವ ಸಂಸ್ಕಾರದಲ್ಲಿ, ನೀತಿ ಪಾಠಗಳಲ್ಲಿ, ಆಹಾರದಲ್ಲಿ, ಮೊಬೈಲ್ ಬಳಕೆ ವಿಚಾರದಲ್ಲಿ ಎಡವುತ್ತಿದ್ದಾರೆ. ಹಾಗಾಗಿ ಈಗಿನ ಮಕ್ಕಳಲ್ಲಿ ಪ್ರಾಯಾವಸ್ಥೆಗೆ ಬರುವಂತಹ ಸಂದರ್ಭದಲ್ಲಿ ಹಲವಾರು ರೋಗಗಳು, ಖಿನ್ನತೆ, ಬಿಪಿ ಮಧುಮೇಹ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಇಲ್ಲಿಯ ಶಿಶು ಮಂದಿರದಲ್ಲಿ ನೀಡುವಂತಹ ಸಂಸ್ಕಾರ ಮಕ್ಕಳ ಜೀವನದುದ್ದಕ್ಕೂ ಪ್ರಯೋಜನವಾಗಲಿದೆ, ನಿಜವಾಗಲೂ ಶ್ಲಾಘನೀಯವಾದದ್ದು ‘ಎಂದು ಹೇಳಿದರು.

ನಂತರ ಬೌದ್ಧಿಕ್ ನೀಡಿದ ಮಾಣಿಪ್ಪಾಡಿ ಕನ್ಸ್ಟ್ರಕ್ಷನ್ ನ ಮಾಲಿಕರಾದ ಕೃಷ್ಣ ಎಂ ಆರ್ ಕಡಬ ಮಾತನಾಡಿ ‘ಮಕ್ಕಳಲ್ಲಿ ಮಾತೃಭಾಷೆ ಪ್ರೇಮ, ಕನ್ನಡದ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಇಂಗ್ಲೀಷ್ ಭಾಷಾ ವ್ಯಾಮೋಹ ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಪೋಷಕರು ಮಾತೃಭಾಷೆ ಪ್ರೇಮವನ್ನು ಕೂಡ ಮಕ್ಕಳಲ್ಲಿ ಬಿತ್ತುವಂತಹ ಕೆಲಸ ಆಗಬೇಕು. ಕೇವಲ ಅಂಕ ಗಳಿಸುವಿಕೆ ಮಾತ್ರ ಅಲ್ಲದೆ ಮಕ್ಕಳಲ್ಲಿ ಧೈರ್ಯದಿಂದ ಬದುಕುವ ಸಂಸ್ಕಾರವನ್ನು ನೀಡಬೇಕು’ ಎಂದು ಹೇಳಿದರು.

ಶಿಶುಮಂದಿರದ ಪುಟಾಣಿಗಳು ಸಾಮೂಹಿಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಯಲ್ಲಿ, ಅತ್ಯಂತ ಭಾವನಾತ್ಮಕ ಕಾರ್ಯಕ್ರಮವಾದ ಪೋಷಕರ ಪಾದ ಪೂಜನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಬಣ್ಣ ಬಣ್ಣದ ಪೋಷಾಕಿನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಪುಟಾಣಿಗಳು, ಮಾತೆಯರು, ಬಾಲ ಗೋಕುಲದ ವಿದ್ಯಾರ್ಥಿಗಳು, ಭಜನಾ ತಂಡದ ಮಕ್ಕಳು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಿಶುಮಂದಿರದ ಸಮಿತಿಯ ಅಧ್ಯಕ್ಷರು,ಸದಸ್ಯರು,ಮಾತೃ ಮಂಡಳಿಯ ಅಧ್ಯಕ್ಷರು, ಮಾತೆಯರು, ಸಾರ್ವಜನಿಕರು ಹಾಗೂ ಶಿಶುಮಂದಿರದ ಮಾತಾಜಿ ವರ್ಗದವರು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಶ್ರೀ ಶಾರದಾ ಶಿಶುಮಂದಿರದ ಅಧ್ಯಕ್ಷರಾದ ಶ್ರೀಮತಿ ಮಧುಶ್ರೀ ಅಗತ್ತಾಡಿ ಅವರು ಸ್ವಾಗತಿಸಿದರು. ಶಿಶು ಮಂದಿರದ ಕೋಶಾಧಿಕಾರಿಯವರಾದ ಶ್ರೀಮತಿ ಯಮುನಾ ಎಸ್ ರೈ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಗಂಗಾರತ್ನ ವಸಂತ ರವರು ವಂದಿಸಿದರು.
ಶ್ರೀಯುತ ಗುರುಕಿರಣ್ ಶೆಟ್ಟಿ ಬಾಲಾಜೆ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here