ವಿಟ್ಲ: ಹಲವಾರು ವರುಷಗಳಿಂದ ವಿಟ್ಲ ಪಟ್ಟಣ ಪಂಚಾಯತ್ಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿ ಮಾಡದೆ ವ್ಯವಹಾರ ನಡೆಸುತ್ತಿರುವುದಾಗಿ ಕೋಳಿ ಅಂಗಡಿಯೊಂದಕ್ಕೆ ದಾಳಿ ನಡೆಸಿದ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಅಂಗಡಿಗೆ ಬೀಗ ಜಡಿದ ಘಟನೆ ನಡೆದಿದೆ.
ವಿಟ್ಲ ಪೇಟೆಯಿಂದ ಕ್ಯಾಂಪ್ಕೋಗೆ ತೆರಳುವ ರಸ್ತೆಯಲ್ಲಿ ಕೋಳಿ ಅಂಗಡಿ ವ್ಯವಹಾರ ನಡೆಸುತ್ತಿದ್ದ ಕೆ ಹೆಚ್ ಅಬೂಬಕ್ಕರ್ ಎಂಬವರು ಕಳೆದ ಏಳು ವರುಷಗಳಿಂದ ಪಟ್ಟಣ ಪಂಚಾಯತ್ಗೆ ತೆರಿಗೆ ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಅವರಿಗೆ ನೊಟೀಸ್ ನೀಡಲಾಗಿತ್ತಾದರೂ ಅವರು ತೆರಿಗೆ ಪಾವತಿ ಮಾಡಿರಲಿಲ್ಲ ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳು ಅಂಗಡಿಗೆ ತೆರಳಿ ಬೀಗ ಜಡಿದಿದ್ದರು. ಬಳಿಕದ ಬೆಳವಣಿಗೆಯಲ್ಲಿ ಅಂಗಡಿ ಮಾಲಕರು ಬಂದು ಬೀಗವನ್ನು ಒಡೆದು ಹಾಕಿ ವ್ಯಾಪಾರ ನಡೆಸಿದ್ದರು. ಮಾ.5ರಂದು ಪಟ್ಟಣ ಪಂಚಾಯತ್ನ ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡರವರ ನೇತೃತ್ವದ ಅಧಿಕಾರಿಗಳ ತಂಡ ಮತ್ತೆ ಅಂಗಡಿಗೆ ಬೀಗ ಜಡಿದಿದೆ. ವಿಟ್ಲ ಠಾಣಾ ಪೊಲೀಸರು ಈ ಸಂದರ್ಭದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.