ಪರೀಕ್ಷೆ ಬಗ್ಗೆ ಭಯ ಬೇಡ, ಖುಷಿಯಿಂದ ಪರೀಕ್ಷೆ ಎದುರಿಸಿ – ಎಸ್.ಐ ಜಂಬೂರಾಜ್
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸರ್ವೆ ಗ್ರಾಮದ ಭಕ್ತಕೋಡಿ ಎಸ್‌ಜಿಎಂ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಟ್ಯೂಷನ್ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಮಾ.8ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈ ಜಂಬುರಾಜ್ ಮಹಾಜನ್ ಮಾತನಾಡಿ ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆಯ ಬಗ್ಗೆ ಭಯಪಡಬಾರದು, ಪೂರ್ವಸಿದ್ದತೆಗಳನ್ನು ಮಾಡಿಕೊಂಡು ಖುಷಿಯಿಂದಲೇ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಹೇಳಿದರು. ಉತ್ತಮ ಅಂಕ ಸಂಪಾದಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡಬೇಕು, ಅಂಕ ಕಡಿಮೆ ಬಂದರೆ ಅಥವಾ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಟೆನ್ಶನ್ ಮಾಡಬಾರದು, ಮುಂದಕ್ಕೂ ಸಾಕಷ್ಟು ಅವಕಾಶಗಳಿವೆ, ಕಲಿಕಾ ವಿಷಯದಲ್ಲಿ ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಅವರು ಕಿವಿಮಾತು ಹೇಳಿದರು.
ಅತಿಥಿಯಾಗಿದ್ದ ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಒತ್ತಡ, ಆತಂಕಕ್ಕೆ ಒಳಗಾಗದೇ ಖುಷಿಯಿಂದಲೇ ಎದುರಿಸಬೇಕು, ಉತ್ತಮ ಅಂಕ ಗಳಿಸಿ ಉತ್ತೀಣಗೊಳ್ಳುವ ಗುರಿ ಇಟ್ಟು ಅಭ್ಯಾಸ ಮಾಡಬೇಕು ಎಂದು ಹೇಳಿದರು. ಧರ್ಮಸ್ಥಳ ಗ್ರಾ.ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ನೀಡಿರುವುದು ಶ್ಲಾಘನೀಯ, ಇದು ಮಕ್ಕಳ ವೈಯಕ್ತಿಕ ಅಂಕ ಗಳಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
ಧರ್ಮಸ್ಥಳ ಯೋಜನೆ ಮೂಲಕ ನಿರಂತರ ಕಾರ್ಯಕ್ರಮ-ಶಶಿಧರ ಎಂ
ಧ.ಗ್ರಾ.ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ ಎಂ ಮಾತನಾಡಿ ಧರ್ಮಸ್ಥಳ ಗ್ರಾ.ಯೋಜನೆ ಮೂಲಕ ಸಮಾಜದಲ್ಲಿ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಹತ್ತು ಹಲವು ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರಲು ಯೋಜನೆ ಮೂಲಕ ಶ್ರಮಿಸಲಾಗುತ್ತಿದೆ, ಶೈಕ್ಷಣಿಕವಾಗಿ ಈ ವರ್ಷ ಸುಮಾರು ೧೦೦೦ ಶಿಕ್ಷಕರನ್ನು ನೇಮಿಸಿಕೊಂಡು ಟ್ಯೂಶನ್ ತರಗತಿಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಉತ್ತಮ ಫಲಿತಾಂಶಕ್ಕೆ ಸಹಕಾರಿ-ಸೋಮಶೇಖರ್
ಎಸ್‌ಜಿಎಂ ಪ್ರೌಢಶಾಲಾ ಮುಖ್ಯ ಗುರು ಸೋಮಶೇಖರ್ ಮಾತನಾಡಿ ಮಕ್ಕಳಿಗೆ ಹೆಚ್ಚುವರಿ ಸಮಯದಲ್ಲಿ ಧರ್ಮಸ್ಥಳ ಯೋಜನೆ ಮುಖಾಂತರ ಟ್ಯೂಶನ್ ತರಗತಿ ನೀಡಿರುವುದರಿಂದ ಮಕ್ಕಳ ಕಲಿಕೆಗೆ ಮತ್ತು ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಲಿಕೆಗೆ ಪೂರಕ-ಶಶಿಧರ್ ಎಸ್.ಡಿ
ಧ.ಗ್ರಾ.ಯೋ ಸರ್ವೆ ಒಕ್ಕೂಟದ ಅಧ್ಯಕ್ಷ ಶಶಿಧರ ಎಸ್.ಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ಬಳಿಕ ಧ.ಗ್ರಾ.ಯೋಜನೆಯಡಿಯಲ್ಲಿ ಟ್ಯೂಷನ್ ಕ್ಲಾಸ್ ನೀಡಿರುವುದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.
ಉತ್ತಮ ಅಂಕ ಪಡೆದು ಕೀರ್ತಿ ತನ್ನಿ-ಸುಂದರ ಬಲ್ಯಾಯ
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಗ್ರಾ.ಯೋ.ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಮಾತನಾಡಿ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ಬರೆಯುವ ಮಕ್ಕಳು ಆಸಕ್ತಿ ವಹಿಸಿ ಕಲಿಯುವ ಮೂಲಕ ಅಂಕ ಪಡೆದು ಶಿಕ್ಷಕರಿಗೂ, ಹೆತ್ತವರಿಗೂ, ಶಾಲೆಗೂ ಕೀರ್ತಿ ತರಬೇಕು, ನಮ್ಮ ಯೋಜನೆ ಮೂಲಕ ಮೂರು ತಿಂಗಳ ಟ್ಯೂಷನ್ ನೀಡಿದ್ದು ಇದು ಮಕ್ಕಳ ಫಲಿತಾಂಶ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜಯಂತ ಬೇಕಲ್, ಶಾಲಾ ಆಡಳಿತ ಮಂಡಳಿಯ ಸಂಚಾಲಕಿ ಡಾ ಯಾದವಿ ಜಯಕುಮಾರ್ ಉಪಸ್ಥಿತರಿದ್ದರು. ಶಿಕ್ಷಕ ಮೋಹನ್ ಸ್ವಾಗತಿಸಿದರು. ಶಿಕ್ಷಕಿ ಸುಜಾತ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಚಿತ್ರ ಸಹಕರಿಸಿದರು.