ಪುತ್ತೂರು: ಭಾರತದ ಕೃಷಿ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ “ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ (PM-DDKY)” ಮತ್ತು “ದ್ವಿದಳ ಧಾನ್ಯಗಳ ಆತ್ಮನಿರ್ಭರತ ಅಭಿಯಾನ”ದ ಉದ್ಘಾಟನಾ ಸಮಾರಂಭ ಅ.11ರಂದು ಐಸಿಎಆರ್ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ (ICAR-DCR) ನೇರ ಪ್ರಸಾರ ಮಾಡಲಾಯಿತು.

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 24,000 ಕೋ.ರೂ. ವೆಚ್ಚದ PM-DDKY ಮತ್ತು 11,440 ಕೋ.ರೂ. ವೆಚ್ಚದ ದ್ವಿದಳ ಧಾನ್ಯಗಳ ಮಿಷನ್ಗೆ ಚಾಲನೆ ನೀಡಿದರು. 42,000ಕೋ.ರೂ.ಗೂ ಹೆಚ್ಚು ಮೌಲ್ಯದ ಕೃಷಿ ಯೋಜನೆಗಳನ್ನು ಪ್ರಕಟಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ 32 ರೈತರು ಸೇರಿದಂತೆ ಸುಮಾರು 100 ಮಂದಿ ಭಾಗವಹಿಸಿದ್ದರು. ನೇರ ಪ್ರಸಾರದ ಮೊದಲು, ರೈತರಿಗಾಗಿ ತಾಂತ್ರಿಕ ಅಧಿವೇಶನಗಳನ್ನು ಏರ್ಪಡಿಸಲಾಗಿತ್ತು. ಪ್ರಧಾನ ವಿಜ್ಞಾನಿ ಡಾ. ಈರದಾಸಪ್ಪ ಇ. ಸ್ವಾಗತಿಸಿದರು. ವಿಜ್ಞಾನಿ ಡಾ. ಮಂಜೇಶ್ ಜಿ.ಎನ್. PM-DDKY ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಹಿರಿಯ ವಿಜ್ಞಾನಿ ಡಾ. ವೀಣಾ ಜಿ. ಎಲ್.ರವರು ನಿರ್ದೇಶನಾಲಯದಲ್ಲಿ ಅಭಿವೃದ್ಧಿಪಡಿಸಲಾದ ನೇತ್ರ ಜಂಬೋ-1, ನೇತ್ರ ಉಭಯ ಮತ್ತು ನೇತ್ರ ಜಂಬೋ-2 ಗೋಡಂಬಿ ತಳಿಗಳು, ಕೃಷಿ ಪದ್ಧತಿಗಳು ಮತ್ತು ಗೋಡಂಬಿ ಹಣ್ಣು ಹಾಗೂ ಬೀಜಗಳನ್ನು ಬೇರ್ಪಡಿಸುವ ಹೊಸ ಯಂತ್ರಗಳ ಬಗ್ಗೆ ವಿವರವಾದ ತಾಂತ್ರಿಕ ಮಾಹಿತಿ ತಿಳಿಸಿದರು.
ಕಾರ್ಯಕ್ರಮದ ಪ್ರಮುಖಾಂಶವಾಗಿ, ಕರ್ನಾಟಕದಲ್ಲಿ ಕೃಷಿ ಜೀವನೋಪಾಯವನ್ನು ಪರಿವರ್ತಿಸಲು ಮಾದರಿ ಗೋಡಂಬಿ ಗ್ರಾಮಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಭಾರತ್ ಅಗ್ರಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯೊಂದಿಗೆ (FPCL) ಗುಣಮಟ್ಟದ ಗೋಡಂಬಿ ನರ್ಸರಿ ಸ್ಥಾಪನೆಗಾಗಿ ಒಪ್ಪಂದಕ್ಕೆ (MoA) ಸಹಿ ಹಾಕಲಾಯಿತು. ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗರವರು ಈ ಯೋಜನೆಗಳ ಮಹತ್ವ ತಿಳಿಸಿ ಗೋಡಂಬಿ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಯಾಂತ್ರೀಕೃತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು. ವಿಜ್ಞಾನಿ ಡಾ. ಅಶ್ವತಿ ಚಂದ್ರಕುಮಾರ್ ವಂದಿಸಿದರು.