ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ, ಮಖೆಜಾತ್ರೆ ಮತ್ತು ಉತ್ಸವಾದಿಗಳ ಪ್ರಕಾರ ಹುಣ್ಣಿಮೆ 3ನೇ ಮಖೆಕೂಟ ಮಾ. 13ರಂದು ರಾತ್ರಿ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಜರಗಲಿದೆ.
ಮಾ. 13ರಂದು ರಾತ್ರಿ 8.30ರಿಂದ ಬಲಿ ಹೊರಟು ಉತ್ಸವ, ಬ್ರಹ್ಮರಥ ಸೇವೆ, ರಥೋತ್ಸವ, ಬಲಿ, ಮಹಾಪೂಜೆ ಹಾಗೂ ವಿಶೇಷ ಬ್ರಹ್ಮರಥ ಪೂಜೆ ನಡೆಯಲಿದೆ. ಮಾ.14ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ 7-30ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಉತ್ಸವ ನಡೆಯಲಿದೆ.
ಮಾ. 15ರಂದು ಬೆಳಗ್ಗೆ ಹಾಗೂ ರಾತ್ರಿ ಉತ್ಸವ, ಮಾ. 16ರಂದು ಬೆಳಗ್ಗೆ ಉತ್ಸವ, ರಾತ್ರಿ 7ರಿಂದ ಉತ್ಸವ, ಶ್ರೀ ದೇವರ ಶಯನೋತ್ಸವ ನಡೆಯಲಿದೆ. ಮಾ. 17ರಂದು ಬೆಳಗ್ಗೆ 6 ಗಂಟೆಗೆ ಕವಾಟೋದ್ಘಾಟನೆ. ಸಂಜೆ 7ರಿಂದ ದೇವರ ಬಲಿ ಹೊರಟು ರಥ ಬೀದಿಯಿಂದ ಹಳೆ ಬಸ್ನಿಲ್ದಾಣದವರೆಗೆ ಹೋಗಿ ಕಟ್ಟೆಪೂಜೆಯಾಗಿ ಸರಕಾರಿ ಪ್ರಾಥಮಿಕ ಶಾಲೆಯಾಗಿ ಬಂದು ಸಂಗಮದಲ್ಲಿ ಅವಭ್ರತ ಸ್ನಾನವಾಗಿ ಧ್ವಜಾವರೋಹಣ ನಡೆಯಲಿದೆ.
ಮಾ. 21ರಂದು ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿ, ರಾತ್ರಿ 9ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮಾ.25ರಂದು ರಾತ್ರಿ ಕದಿಕ್ಕಾರು ಬೀಡಿನಿಂದ ಭಂಡಾರ ಬಂದು ದೇವಳದ ಸಂತೆಮಜಲಿನಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಾ.13ರಂದು ಸಂಜೆ 6.30ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಉಪ್ಪಿನಂಗಡಿ ಘಟಕದಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರದವರಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟ, ಮಾ.21ರಂದು ರಾತ್ರಿ 8ರಿಂದ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ತಾಳಮದ್ದಳೆ, ಮಾ.25ರಂದು ರಾತ್ರಿ 7.30ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ನಾಗಮಾಣಿಕ್ಯ ಚಾರಿತ್ರಿಕ ಪೌರಣಿಕ ನಾಟಕ ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.