ರಾಮಕುಂಜ: ಆತೂರು ಬದ್ರಿಯಾ ಜುಮ್ಮಾ ಮಸೀದಿಗೆ ಪ್ರಾರ್ಥನೆಗೆ ಬರುವವರಿಗೆ ಊಟದ ಕಿಟ್ ಕೊಡುವ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಆತೂರು ನಿವಾಸಿ ಝೈನುದ್ದೀನ್ (26ವ.)ಎಂಬವರು ನೀಡಿದ ದೂರಿನಂತೆ ಹೇಂತಾರು ನಿವಾಸಿ ನವಾಜ್ ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಗಾಯಾಳು ಝೈನುದ್ದೀನ್ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಾ.11ರಂದು ಸಂಜೆ 6 ಗಂಟೆಗೆ ಕೊಲ ಗ್ರಾಮದ ಆತೂರು ಬದ್ರಿಯಾ ಜುಮ್ಮ ಮಸೀದಿಗೆ ಪ್ರಾರ್ಥನೆಗೆ ಬರುವವರಿಗೆ ಊಟದ ಕಿಟ್ ನೀಡಲು ತಯಾರಿ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಹೇಂತಾರು ನಿವಾಸಿ ನವಾಜ್ ಊಟದ ಕಿಟ್ ಕೊಡುವಂತೆ ಕೇಳಿದ್ದು, ನಮಾಜ್ ಪ್ರಾರ್ಥನೆ ಮುಗಿದ ಬಳಿಕ ಊಟದ ಕಿಟ್ ಕೊಡುತ್ತೇನೆ. ಈಗ ಕೊಡಲು ಆಗುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಗೆ ಶೌಚಾಲಯಕ್ಕೆ ಹೋಗಿ ವಾಪಾಸ್ ಬರುವಾಗ ನವಾಜ್ ತಡೆದು ನಿಲ್ಲಿಸಿ ಆತೂರಿನಲ್ಲಿ ನೀನು ದೊಡ್ಡ ಜನವಾ ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು, ಗೋಡೆಯ ಮೇಲೆ ದೂಡಿ ಹಾಕಿದ್ದು ಈ ವೇಳೆ ಇಬ್ಬರ ನಡುವೆ ಉರುಳಾಟ ನಡೆದಿದೆ. ನಂತರ ನವಾಜ್ ಮಲೆಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ನಂತರ ಮೈಕೈ ನೋವು ಇರುವುದರಿಂದ ಮನೆಗೆ ಬಂದು ತಂದೆಗೆ ವಿಚಾರ ತಿಳಿಸಿದ್ದು ಅವರು ಖಾಸಗಿ ವಾಹನದಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿದ್ದಾರೆ ಎಂದು ಝೈನುದ್ದೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.