
ಪುತ್ತೂರು: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮವಾಗಿ ಮಾ. 14 ರಂದು ಹಮ್ಮಿಕೊಂಡ ದೀಪ ಪ್ರದಾನ “ಜ್ಞಾನದೀಪಾರ್ಪಣಂ” ಕಾರ್ಯಕ್ರಮ ಅಕ್ಷರಶಃ ಭಾವಪೂರ್ಣತೆಯ ಕಾರ್ಯಕ್ರಮವಾಗಿ ಮೂಡಿಬಂತು.
ತಂದೆ-ತಾಯಿಗೆ ಮಕ್ಕಳು ಯಾವ ರೀತಿಯಲ್ಲಿ ವಿಧೇಯರಾಗಿರಬೇಕು, ಜತೆಗೆ ತಾಯಿ-ಮಗಳ ಸಂಬಂಧ, ತಂದೆ-ಮಗಳ ಸಂಬಂಧ, ಭಾವುಕ ಕ್ಷಣ, ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಭರಿಸುವ ಕ್ಷಣಗಳಾಗಿ ಮಾರ್ಪಾಡುಗೊಂಡಿತು.
ಎಸ್.ಎಸ್.ಎಲ್.ಸಿ ಮಕ್ಕಳು ಹಾಗೂ ಪೋಷಕರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ ಶಾಲಾ ಯಾದವ ಸಭಾಂಗಣದಲ್ಲಿ ಜರಗಿತು.
ಮೊದಲಿಗೆ ಭಾರತಮಾತೆ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳು ಪೋಷಕರ ಜತೆ ತಾಯಿ ಭಾರತಮಾತೆಗೆ ಹಣತೆಯ ದೀಪ ಇಟ್ಟರು. ತಂದೆ ತಾಯಿಯನ್ನು ಕೂರಿಸಿ ಹರಿವಾಣದಲ್ಲಿ ಅವರ ಪಾದಗಳನ್ನು ಮಕ್ಕಳು ತೊಳೆದು, ಅರಿಶಿನ, ಕುಂಕುಮಗಳನ್ನು ಪಾದಗಳಿಗೆ ಹಚ್ಚಿ, ಪುಷ್ಪವನ್ನು ಪಾದಗಳಿಗೆ ಅರ್ಪಿಸಿ, ಬಳಿಕ ಆರತಿ ಬೆಳಗಲಾಯಿತು. ಬಳಿಕ ಮಕ್ಕಳ ತಲೆಗೆ ಅಕ್ಷತೆ ಹಾಕುವ ಮೂಲಕ ಪೋಷಕರು ಆಶೀರ್ವದಿಸಿದರು. ಪೋಷಕರು ಹಾಗೂ ಮಕ್ಕಳು ಪರಸ್ಪರ ಸಿಹಿತಿಂಡಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಇಡೀ ಸಭಾಸದನದಲ್ಲಿ ಆಸೀನರಾದ ವಿದ್ಯಾರ್ಥಿಗಳು ಮತ್ತು ಪೋಷಕರ ಕಣ್ಣಂಚಿನಲ್ಲಿ ನೀರು ಬಂದು ಭಾವುಕ ಕ್ಷಣದತ್ತ ಜಾರಿದರು. ಹತ್ತನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿದರು.
ವಿವೇಕಾನಂದರ ಆಶಯದಂತೆ ಇಲ್ಲಿ ವಿದ್ಯಾರ್ಜನೆ – ದಾಮೋದರ ಶರ್ಮ
ಬಾರ್ಕೂರಿನ ಪುರೋಹಿತ ದಾಮೋದರ ಶರ್ಮ ದಿಕ್ಸೂಚಿ ಭಾಷಣ ಮಾಡಿ, ಜಗತ್ತಿನ ಶ್ರೇಷ್ಠ ಸಂತರಲ್ಲೊಬ್ಬರಾದ ಸ್ವಾಮಿ ವಿವೇಕಾನಂದ ಆಶಯದಂತೆ ನಡೆಯುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಸನಾತನ ಹಿಂದೂ ಧರ್ಮದ ವಿಚಾರಧಾರೆಗಳನ್ನು ಬಿತ್ತುತ್ತಿರುವುದು ಶ್ಲಾಘನೀಯ. ಮೊದಲನೆಯದಾಗಿ ತಾಯಿ-ತಂದೆ, ತಾವು ಕಲಿತ ಶಿಕ್ಷಣ ಸಂಸ್ಥೆ, ಶಿಕ್ಷಕರನ್ನು ಯಾವತ್ತೂ ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಇಂದು ಹಮ್ಮಿಕೊಂಡ “ಜ್ಞಾನದೀಪಾರ್ಪಣಂ” ಅತ್ಯಂತ ಉತ್ತಮ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದ ಆಧಾರದಲ್ಲಿ ವಿದ್ಯಾರ್ಥಿಗಳು ಮುಂದೆ ಒಳ್ಳೆಯ ಪ್ರಜೆಯಾಗಿ ತಾನು ಕಲಿತ ಶಾಲೆಗೆ ಕೊಡುಗೆಗಳನ್ನು ನೀಡಿ, ಈ ಮೂಲಕ ರಾಷ್ಟ್ರ ನಿರ್ಮಾಣದಲ್ಲೂ ತೊಡಗಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಡಾ.ಶಿವಪ್ರಕಾಶ್, ಸಂಚಾಲಕ ರವಿನಾರಾಯಣ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಸ್ವಾಗತಿಸಿದರು.
ಆಧುನಿಕತೆಯ ತಂತ್ರಜ್ಞಾನ ಮತ್ತಿತರ ಸೋಗಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾದಿ ತಪ್ಪುತ್ತಿದ್ದಾರೆ. ಪೋಷಕರು, ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಇಲ್ಲದಾಗುತ್ತಿದೆ. ಇದರಿಂದ ಹೊರಗೆ ಬರುವುದು “ಜ್ಞಾನದೀಪಾರ್ಪಣಂ” ಕಾರ್ಯಕ್ರಮದ ಉದ್ದೇಶವಾಗಿತ್ತು. ತಂದೆತಾಯಿಯರ ಪಾದಪೂಜೆ ಮಾಡಿದಾಗ ಮಕ್ಕಳ ಮನಸ್ಸು ಹೆಚ್ಚು ಧನಾತ್ಮಕತೆಯ ಹಾದಿಯಲ್ಲಿ ಸಾಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು, ವಿದ್ಯಾರ್ಥಿಗಳು ಭಾವಪೂರ್ಣವಾಗಿ ಪಾಲ್ಗೊಂಡದ್ದು ಕಾರ್ಯಕ್ರಮದ ಸಾರ್ಥಕತೆಗೆ ಕಾರಣವಾಯಿತು.
ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ
ಭಾವುಕ ಕ್ಷಣಗಳ ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ದಾಮೋದರ ಶರ್ಮರವರ ಮಾತುಗಳ ಮೂಲಕ, ಪೋಷಕರ ಪಾದಪೂಜೆ ಮಾಡುವಾಗ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಮಧ್ಯೆ ಉಂಟಾದ ಭಾವುಕ ಕ್ಷಣಗಳ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಮಕ್ಕಳ ಮನಸ್ಸನ್ನು ಹೀಗೆಯೂ ಪರಿವರ್ತಿಸಬಹುದು ಎಂಬುದನ್ನು ವಿವೇಕಾನಂದ ಶಾಲೆಯಲ್ಲಿ ನಡೆದ ಈ ವಿನೂತನ ಕಾರ್ಯಕ್ರಮ ಸಾಕ್ಷೀಕರಿಸಿತು.