ಆತ್ಮವಿಶ್ವಾಸವೇ ಯಶಸ್ಸಿನ ಕೀಲಿಕೈ– ಶರತ್ ಆಳ್ವ ಚನಿಲ
ಪುತ್ತೂರು:ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಮಾರ್ಚ್ 18 ರಂದು ಎಸ್ .ಎಸ್.ಎಲ್.ಸಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರವು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯುವ ಬರಹಗಾರ ಮತ್ತು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶರತ್ ಆಳ್ವ ಚನಿಲ ಮಾತನಾಡಿ ಎಸ್.ಎಸ್ ಎಲ್ .ಸಿ ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮಹತ್ತರವಾದ ಮೈಲಿಗಲ್ಲು. ಜೀವನದ ಪರೀಕ್ಷೆಯಲ್ಲಿ ಈಜಾಡಿ ಜಯಿಸಬೇಕಾಗಿದೆ. ಪರೀಕ್ಷೆಯ ಸಮಯದಲ್ಲಿ ಮಾನಸಿಕವಾಗಿ, ದೈಹಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆ.
ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ, ಏಕಾಗ್ರತೆಯಿಂದ ಉತ್ತಮ ಫಲಿತಾಂಶ ತಂದಾಗ ಮಕ್ಕಳ ಭವಿಷ್ಯ ಸುಸಂಪನ್ನಗೊಳ್ಳುತ್ತದೆ. ಮಕ್ಕಳು ಚೆನ್ನಾಗಿ ಬದ್ದತೆಯಿಂದ ಓದಿ ಅಭ್ಯಾಸ ಮಾಡಿದಾಗ ಹೆದರುವ ಅವಶ್ಯಕತೆ ಇಲ್ಲ. ನಕರಾತ್ಮಕವಾಗಿ ಚಿಂತೆ ಮಾಡದೇ ಸಕಾರಾತ್ಮಕವಾಗಿ ಚಿಂತನೆ ಮಾಡಿದರೆ, ಹೆತ್ತವರ ಕನಸು ನನಸು ಮಾಡಬಹುದು ಎಂದರು.
ವಿದ್ಯಾರ್ಥಿಗಳು ಮೊದಲು ಪರೀಕ್ಷಾ ಭಯದಿಂದ ಹೊರಬರ ಬೇಕು. ಆತ್ಮವಿಶ್ವಾಸವನ್ನು ಪಾಠ ಪ್ರವಚನಗಳನ್ನು ಓದಿಕೊಂಡು ಮನನ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರಿಂದ ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಿದ್ಧರಾಗಬೇಕು. ಉತ್ತಮ ಜ್ಞಾನ ಇದ್ದರೂ ಸಹ ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದೇ ಕಡಿಮೆ ಅಂಕ ಪಡೆಯು ತ್ತಿದ್ದಾರೆ. ಯಾರು ಭಯಬಿಟ್ಟು ಪರೀಕ್ಷೆ ಬರೆಯುತ್ತಾರೋ ಅವರು ಹೆಚ್ಚು ಅಂಕ ಗಳಿಸುತ್ತಾರೆ. ಪರೀಕ್ಷೆಯಲ್ಲಿ ಮೊದಲು ಎಲ್ಲಾ ಪ್ರಶ್ನೆಗಳನ್ನು ಓದಬೇಕು. ನಂತರ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ನಂತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಆಲೋಚಿಸಿ ಉತ್ತರ ಬರೆಯಬೇಕು ಎಂದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮೋನಪ್ಪ ಪೂಜಾರಿ, ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೈನ್ , ಹಿರಿಯ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಅಗರ್ತಬೈಲು ಮತ್ತು ಎಸ್ .ಡಿ ಎಂ .ಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಉಪಸ್ಥಿತರಿದ್ದರು.