ಕಠಿಣ ವೃತಾಚರಣೆಯೊಂದಿಗೆ ಹಿಂದಿನ ಸಂಪ್ರದಾಯದಂತೆ ಸೇವೆ ಕಡ್ಡಾಯ
ಉಪ್ಪಿನಂಗಡಿ: ದೇವಾರಾಧನೆಯಲ್ಲಿ ದಿನ ನಿತ್ಯ ವೈದಿಕ ಪರಂಪರೆಯಲ್ಲಿ ಪೂಜೆಗೊಳ್ಳುವ ಗಯಾಪದ ಕ್ಷೇತ್ರ ಉಪ್ಪಿನಂಗಡಿಯ ಕಾರಣಿಕ ಶಕ್ತಿಯಾದ ಶ್ರೀ ಮಹಾಕಾಳಿ ಅಮ್ಮನವರನ್ನು ವರ್ಷದಲ್ಲಿ ಒಂದು ದಿನ ಮೆಚ್ಚಿಯ ಸಂದರ್ಭದಲ್ಲಿ ದೈವಾರಾಧನಾ ಪದ್ಧತಿಯಲ್ಲಿ ಪೂಜಿಸಲಾಗುತ್ತಿದ್ದು, ಈ ಬಾರಿ ಮಾ.21ರಂದು ವಾರ್ಷಿಕ ಮೆಚ್ಚಿ ನಡೆಯಲಿದೆ. ಮಹಾಕಾಳಿ ಮೆಚ್ಚಿಗೆ ಸಂಬಂಧಿಸಿದ ಹಿಂದಿನಿಂದ ಬಂದ ಕೆಲವೊಂದು ಪೂರ್ವ ಶಿಷ್ಟಾಚಾರಗಳನ್ನು ಈಗಲೂ ಕಡ್ಡಾಯವಾಗಿ ಅನುಸರಿಸಿಕೊಂಡು ಬರಲಾಗುತ್ತದೆ.

ಅಣಿ ಕಟ್ಟೆಯಲ್ಲಿ ವಾಸ:
ಮೆಚ್ಚಿಯ ದಿನ ದೈವ ಸ್ವರೂಪಿಯಾಗಿ ಕಾಣುವ ಮಹಾಕಾಳಿ ಅಮ್ಮನವರ ಬಲಭಾಗದಲ್ಲಿ ಅಂದು ಭೈರವ ದೈವ ಹಾಗೂ ಎಡಭಾಗದಲ್ಲಿ ಧಮ್ಮ ಜಾವತೆ ಎಂಬ ದೈವಗಳು ಇರುತ್ತದೆ. ಈ ಮೂರು ದೈವಗಳಿಗೆ ನರ್ತನ ಸೇವೆ ಮಾಡುವವರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಎರಡನೇ ಮಖೆ ಜಾತ್ರೆಯ ತೀರ್ಥ ಸ್ನಾನದ ದಿನ ನೇತ್ರಾವತಿ- ಕುಮಾರಧಾರ ನದಿ ಸಂಗಮ ಕ್ಷೇತ್ರದಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ವರ್ಷಾವಧಿ ಮೆಚ್ಚಿಯ ದೈವಾರಾಧಕ ಸೇವೆ ಸಲ್ಲಿಸಲು ದೇವಾಲಯದಿಂದ ಪಡಿಯಕ್ಕಿಯನ್ನು ಪಡೆಯಬೇಕು. ಬಳಿಕ ಅಲ್ಲಿಂದ ನೇರವಾಗಿ ರಥಬೀದಿಯಲ್ಲಿರುವ ಅಣಿ ಕಟ್ಟೆಗೆ ತಂದು ಅದನ್ನು ಅಲ್ಲಿಟ್ಟು ಕಟ್ಟೆಗೆ ಮೂರು ಸುತ್ತು ಬಂದು ಪ್ರಾರ್ಥನೆ ಸಲ್ಲಿಸಬೇಕು. ಬಳಿಕ ಪಡಿಯಕ್ಕಿಯನ್ನು ಇಟ್ಟುಕೊಂಡು ಬಟ್ಟಲನ್ನು ದೇವಾಲಯಕ್ಕೆ ಹಿಂದಿರುಗಿಸಿ, ಬಳಿಕ ಅಣಿಕಟ್ಟೆಯಲ್ಲಿಯೇ ಮೆಚ್ಚಿಯ ಜಾತ್ರೆಯವರೆಗೆ ವಾಸ ಮಾಡಬೇಕು. ಇವರಿಗೆ ಮೂರನೇ ಮಖೆಕೂಟದ ಮರುದಿನ (ತೀರ್ಥಸ್ನಾನದಂದು) ಹಾಗೂ ಮೆಚ್ಚಿ ಜಾತ್ರೆಯ ದಿನ ಹೀಗೆ ಮೂರು ಬಾರಿ ದೇವಾಲಯದಿಂದ ಪಡಿಯಕ್ಕಿಯನ್ನು ನೀಡಲಾಗುತ್ತದೆ. ಪಡಿಯಕ್ಕಿ ಪಡೆದ ಇವರು ಮೆಚ್ಚಿ ಮುಗಿಯುವವರೆಗೆ ಈ ಅಣಿಕಟ್ಟೆಯಲ್ಲಿಯೇ ವಾಸ ಮಾಡಬೇಕಾಗುತ್ತದೆ. ಇವರಲ್ಲಿ ಇಬ್ಬರು ದೈವನರ್ತನ ಸೇವೆ ಮಾಡುವವರು ಬೆಳಗ್ಗಿನ ಹೊತ್ತಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಹೊರಗೆ ಹೋಗಬಹುದಾದರೂ, ಮಹಾಕಾಳಿ ಅಮ್ಮನವರಿಗೆ ನರ್ತನ ಸೇವೆ ಮಾಡುವವರು ಗಡಿ ಕಟ್ಟೆಯಲ್ಲೇ ನಿಂತು ಮೆಚ್ಚಿಗೆ ಬೇಕಾದಂತಹ ವಸ್ತುಗಳ ತಯಾರಿಯ ಕೆಲಸದಲ್ಲೇ ತೊಡಗಿಸಿಕೊಳ್ಳಬೇಕಾಗುತ್ತದೆ. ಅವರು ಅವರ ವೈಯಕ್ತಿಕ ಕಾರ್ಯಕ್ಕಾಗಿ ಎಲ್ಲಿಯೂ ಹೊರಗೆ ಹೋಗುವಂತಿಲ್ಲ.

ಅಣಿ ತಯಾರಿಯ ಕೆಲಸ:
ಮಹಾಕಾಳಿ ಅಮ್ಮನವರ ಮೆಚ್ಚಿಗೆ ಸಾವಿರದ ಒಂದು ಅಡಿಕೆ ಹಾಳೆಯಿಂದ ಒಂಭತ್ತು ಕೋಲು ಉದ್ದದ ಮುಡಿ, ಒಂಭತ್ತು ಕೋಲು ಉದ್ದದ ನಾಲಗೆ ಹಾಗೂ ಮುಖವಾಡವನ್ನು ತಯಾರಿಸಲಾಗುತ್ತದೆ. ಎಂಟು ಕಟ್ಟುಗಳಲ್ಲಿರುವ ಒಟ್ಟು ಸಾವಿರದ ಒಂದು ಅಡಿಕೆ ಹಾಳೆಯನ್ನು ತರಲು ನಿರ್ದಿಷ್ಟ ಸಮುದಾಯದ ಮನೆಗಳಿಗೆ ಜವಾಬ್ದಾರಿ ಇದೆ. ಪಾರಂಪರಿಕವಾಗಿ ಬಂದ ಈ ಜವಾಬ್ದಾರಿಯನ್ನು ಆ ಸಮುದಾಯದ ಮನೆಯವರೇ ಈಗಲೂ ನಡೆಸಿಕೊಂಡು ಬರುತ್ತಾರೆ. ಅವರು ತಂದ ಹಾಳೆಯನ್ನು ದೈವ ನರ್ತನ ಸೇವೆ ಮಾಡುವವರು ನದಿಯಲ್ಲಿ ಮುಳುಗಿಸಿ ಅವುಗಳನ್ನು ಬೇಕಾದಂತೆ ತುಂಡರಿಸಿ, ಚಿತ್ರವನ್ನು ಬಿಡಿಸಿ, ಒಂದೊಂದೇ ಅಡಿಕೆ ಹಾಳೆಗಳನ್ನು ಜೋಡಿಸಿ ಮಹಾಕಾಳಿ ಅಮ್ಮನವರಿಗೆ ಮುಡಿ, ನಾಲಗೆ, ಮುಖವಾಡವನ್ನು ಈ ಕಟ್ಟೆಯಲ್ಲಿಯೇ ತಯಾರಿಸುತ್ತಾರೆ. ಅದರಲ್ಲಿ ಮೊದಲು ಮುಟ್ಟುವ ಅಡಿಕೆ ಹಾಳೆಯನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಅದನ್ನು ಮೆಚ್ಚಿಯ ದಿನ ದೈವ ಸ್ವರೂಪಿಣಿಯಾಗಿ ಕಾಣುವ ಮಹಾಕಾಳಿ ಅಮ್ಮನವರ ಮುಡಿಯ ಮೇಲ್ಭಾಗದಲ್ಲಿ ಸಿಕ್ಕಿಸಲಾಗುತ್ತದೆ.
ಅಣಿಗೆ ನೈಸರ್ಗಿಕ ಬಣ್ಣ:
ಇಲ್ಲಿ ಮೆಚ್ಚಿಯ ಸಂದರ್ಭ ಶ್ರೀ ಮಹಾಕಾಳಿ ಅಮ್ಮನವರಿಗೆ ಅರ್ಪಣೆಯಾಗುವ ಮುಡಿ, ನಾಲಗೆ, ಮುಖವಾಡಗಳಿಗೆ ಯಾವುದೇ ರಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಇದಕ್ಕೆ ಬೇಕಾದ ಕೆಂಪು ಬಣ್ಣವನ್ನು ಮರವೊಂದರಿಂದ ತೆಗೆಯಲಾಗುತ್ತದೆ. ಹಳದಿ ಬಣ್ಣವನ್ನು ಆನೆ ಅರಶಿನದ ಗೆಡ್ಡೆಯಿಂದ ತಯಾರಿಸಲಾಗುತ್ತದೆ. ಕಪ್ಪು ಬಣ್ಣವನ್ನು ತೆಂಗಿನ ಚಿಪ್ಪು ಅನ್ನು ಹೊತ್ತಿಸಿ, ಅದರಿಂದ ಪಡೆಯಲಾಗುತ್ತದೆ. ಹೀಗೆ ಇದಕ್ಕೆ ಬಳಸುವ ಬಣ್ಣವನ್ನು ಕೂಡಾ ನೈಸರ್ಗಿಕವಾಗಿಯೇ ಪಡೆಯಲಾಗುತ್ತದೆ. ಇದೆಲ್ಲಾ ಕೆಲಸವನ್ನು ಮಹಾಕಾಳಿ ಮೆಚ್ಚಿಯಂದು ದೈವನರ್ತನ ಸೇವೆ ಮಾಡುವವರೇ ಮಾಡುತ್ತಾರೆ. ಈ ಬಣ್ಣಗಳನ್ನು ಪಡೆಯುವಾಗಲೂ ಹಿಂದಿನಿಂದ ಬಂದ ಸಂಪ್ರದಾಯವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಕಠಿಣ ವೃತಾಚರಣೆ:
ಪಡಿಯಕ್ಕಿಯನ್ನು ಸ್ವೀಕರಿಸಿ ಗಡಿಕಟ್ಟೆಯಲ್ಲಿ ವಾಸ ಆರಂಭಿಸಿದ ಬಳಿಕ ದೈವ ನರ್ತನ ಸೇವೆ ಸಲ್ಲಿಸುವವರು ಕಠಿಣ ವೃತಾಚರಣೆಯಲ್ಲಿ ಇರಬೇಕಾಗುತ್ತದೆ. ಮೂರು ಹೊತ್ತು ಸ್ನಾನ, ಒಂದು ಹೊತ್ತು ಊಟ, ಎರಡು ಹೊತ್ತು -ಲಾಹಾರವನ್ನು ಸ್ವೀಕರಿಸಬೇಕು. ಸಸ್ಯಹಾರವನ್ನೇ ಸೇವನೆ ಮಾಡಬೇಕು. ದುಶ್ಟಟಗಳಿಂದ ದೂರ ಇರಬೇಕು. ಮಿತ ಮಾತು, ಕೆಟ್ಟ ಶಬ್ಧಗಳನ್ನು ಬಳಸಬಾರದು. ಒಟ್ಟಿನಲ್ಲಿ ಸಾತ್ವಿಕ ಜೀವನವನ್ನು ನಡೆಸಬೇಕು. ವೃತಾಚರಣೆಯ ನಿಯಮಗಳನ್ನು ಇವರು ಎಲ್ಲಿಯೂ ತಪ್ಪುವಂತಿಲ್ಲ.
ಹೊಳೆ ದಾಟಬೇಕು:
ಶ್ರೀ ಮಹಾಕಾಳಿ ಅಮ್ಮನವರ ದೈವ ನರ್ತನ ಸೇವೆ ಮಾಡುವವರು ಮಹಾಕಾಳಿ ಮೆಚ್ಚಿ ಮುಗಿದು ಸೂರ್ಯಾಸ್ತದೊಳಗೆ ಉಪ್ಪಿನಂಗಡಿಯ ನೇತ್ರಾವತಿ ನದಿಯನ್ನು ದಾಟಿ ಇಳಂತಿಲ ಗ್ರಾಮಕ್ಕೆ ತೆರಳಬೇಕು. ಅಲ್ಲಿನ ಕಡವಿನಬಾಗಿಲು ಎಂಬಲ್ಲಿರುವ ಗುರುವಪ್ಪ ಪೂಜಾರಿಯವರ ಮನೆಯಲ್ಲಿ ಒಂದು ದಿನ ನಿಂತು, ಕಡವಿನ ಬಾಗಿಲಿನ ಶ್ರೀ ಕಲ್ಕುಡ ದೈವದ ಮೂಲಸ್ಥಾನಕ್ಕೆ ತೆರಳಿ ಅಲ್ಲಿ ಪ್ರಾರ್ಥಿಸಿ, ಕಾಣಿಕೆ ಇಟ್ಟು ಅಲ್ಲಿಂದ ಅವರು ತಮ್ಮ ಮನೆಗಳಿಗೆ ತೆರಳಬೇಕಾಗುತ್ತದೆ. ಮತ್ತೆ ಒಂದು ತಿಂಗಳ ಕಾಲ ಇವರು ಉಪ್ಪಿನಂಗಡಿಗೆ ಬರುವಂತಿಲ್ಲ. ಎರಡು ತಿಂಗಳ ಕಾಲ ಉಪ್ಪಿನಂಗಡಿ ಗ್ರಾಮದಲ್ಲಿ ದೈವಗಳ ನರ್ತನ ಸೇವೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಪದ್ಧತಿಗಳನ್ನು ಶತಮಾನಗಳಿಂದಲೂ ಇಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ. ಇವು ಅಲಿಖಿತ ನಿಯಮಗಳಾದರೂ, ತಲೆತಲಾಂತರದಿಂದ ಬಂದಿರುವ ಈ ಸಂಪ್ರದಾಯವನ್ನು ಈಗಲೂ ಇಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ.
ನೂಲು ಕಟ್ಟುವುದು:
ಅಣಿಕಟ್ಟೆಯಲ್ಲಿ ಅಣಿಯನ್ನು ಸಿದ್ಧಪಡಿಸುವುದಲ್ಲದೆ, ಮಹಾಕಾಳಿ ಅಮ್ಮನವರ ದೈವನರ್ತನ ಸೇವೆ ಸಲ್ಲಿಸುವವರು ಕೈಕಾಲು ಸೆಳೆತ, ದೃಷ್ಟಿ, ಮದುವೆ ಭಾಗ್ಯ ಕೂಡಿ ಬರಲು ಸೇರಿದಂತೆ ಕೆಲವೊಂದು ದೋಷಗಳ ನಿವಾರಣೆಗೆ ಕಪ್ಪು ನೂಲನ್ನು ಕಟ್ಟುತ್ತಾರೆ. ಮಹಾಕಾಳಿ ಅಮ್ಮನವರ ಮುಂದೆ ಪ್ರಾರ್ಥಿಸಿ ಪ್ರಸಾದ ತಂದು ಅದನ್ನು ಕಟ್ಟೆಯಲ್ಲಿಟ್ಟು, ಕಪ್ಪು ನೂಲಿನೊಂದಿಗೆ ಪ್ರಾರ್ಥಿಸಿ ನೂಲನ್ನು ಇಲ್ಲಿ ಕಟ್ಟಲಾಗುತ್ತದೆ. ಹಲವರು ಬಂದು ಭಕ್ತಿ- ಭಾವ- ನಂಬಿಕೆಯಿಂದ ಇಲ್ಲಿ ನೂಲನ್ನು ಕಟ್ಟಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ೨ನೇ ಮಖೆಕೂಟದಲ್ಲಿ ಪಡಿಯಕ್ಕಿ ಸ್ವೀಕರಿಸುವ ಇವರು ಮಹಾಕಾಳಿ ಮೆಚ್ಚಿ ಮುಗಿಯುವವರೆಗೆ ಸುಮಾರು ೨೦ರಿಂದ ೩೫ ದಿನಗಳಷ್ಟು ಕಾಲ ಈ ಅಣಿಕಟ್ಟೆಯಲ್ಲೇ ವಾಸ್ತವ್ಯವಿದ್ದು, ಕಠಿಣ ವೃತಾಚಾರಣೆಯೊಂದಿಗೆ ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿಗೆ ಪೂರ್ವ ತಯಾರಿಯನ್ನು ನಡೆಸಬೇಕಿದೆ.
ಬಿದಿರು ಹಿಡಿಯಲು ನಾಲ್ಕು ಮನೆತನದವರು
ಶ್ರೀ ಮಹಾಕಾಳಿ ಅಮ್ಮನವರ ದೈವ ನರ್ತನ ಸೇವೆ ಮಾಡುವವರು ಪ್ರಾರ್ಥನೆಗೈದು ಅಡಿಕೆ ಹಾಳೆಯಿಂದ ತಯಾರಿಸಲ್ಪಟ್ಟ ಅಮ್ಮನವರ ನಾಲಗೆ, ಮುಖವಾಡ ಹಾಗೂ ನಾಲಗೆಯನ್ನು ಮೆಚ್ಚಿಯ ದಿನ ಬಿದಿರು ಹಿಡಿಯುವ ನಾಲ್ಕು ಮನೆತನದವರಿಗೆ ಬಿಟ್ಟು ಕೊಡುತ್ತಾರೆ. ಈ ನಾಲ್ಕು ಮನೆತನಗಳು ಬಿಲ್ಲವ ಸಮಾಜದವರಾಗಿದ್ದು, ಅವರು ಬೋಂಟ್ರ ಮನೆತನದವರಾಗಿರುತ್ತಾರೆ. ಇದರಲ್ಲಿ ಎರಡು ಮನೆತನಗಳು ಉಪ್ಪಿನಂಗಡಿ ಗ್ರಾಮದಲ್ಲಿದ್ದರೆ, ಇನ್ನೆರಡು ಮನೆತನಗಳು ಇಳಂತಿಲ ಗ್ರಾಮದಲ್ಲಿವೆ. ಹೀಗೆ ಬಿಟ್ಟುಕೊಟ್ಟ ಅಮ್ಮನವರ ಮುಡಿಯನ್ನು ಬಿದಿರು ಹಿಡಿಯುವ ಮನೆತನದವರು ಪ್ರಾರ್ಥನೆಗೈದು ಸ್ವೀಕರಿಸುತ್ತಾರೆ. ಬಳಿಕ ಆ ನಾಲ್ಕು ಬಿದಿರಿಗೆ ಮುಡಿಯನ್ನು ಸಿಕ್ಕಿಸುತ್ತಾರೆ. ಶ್ರೀ ಮಹಾಕಾಳಿ ಅಮ್ಮನವರ ದೈವ ನರ್ತಕ ದೇವಸ್ಥಾನದ ಬಳಿಯಿಂದ ಸಂತೆಮಜಲಿಗೆ ವಲಸರಿ ಬಂದಾಗ ದೈವಕ್ಕೆ ಮುಡಿಯೇರಿಸಲಾಗುತ್ತದೆ. ಮುಡಿಯೇರಿಸಿಕೊಂಡ ಬಳಿಕ ೯ ಬಲಿ ನಡೆಯುತ್ತದೆ. ಆಗ ದೈವ ತಿರುಗಿದಾಗ ಬಿದಿರು ಹಿಡಿಯುವವರು ಕೂಡಾ ಸಮತೋಲನ ಕಾಪಾಡಿಕೊಂಡು ಮುಡಿಯು ತಿರುಗದಂತೆ ಸುತ್ತು ಬರಬೇಕಾಗುತ್ತದೆ. ಬಿದಿರು ಹಿಡಿಯುವವರು ವೃತಾಚರಣೆ, ಶುದ್ಧಾಚಾರದಲ್ಲಿ ಇರಬೇಕಾಗಿದ್ದು, ಆಗ ಮಾತ್ರ ಶ್ರೀ ಮಹಾಕಾಳಿ ಅಮ್ಮನವರ ಕೃಪೆ ಸಿಗಲು ಸಾಧ್ಯ. ಹಾಗಾದಾಗ ಅಷ್ಟು ಎತ್ತರದ, ಭಾರದ ಮುಡಿಯಾದರೂ ಯಾವುದೇ ತೊಂದರೆಯಾಗುವುದಿಲ್ಲ. ಸಲೀಸಾಗಿ ಬಿದಿರು ಹಿಡಿಯುವ ಸೇವೆ ನಡೆಸಲು ಸಾಧ್ಯವಾಗುತ್ತದೆ. ನನಗೂ ಕೂಡಾ ಸುಮಾರು ೪೦ರಿಂದ ೪೫ ಬಾರಿ ಶ್ರೀ ಮಹಾಕಾಳಿ ಅಮ್ಮನವರ ವಾರ್ಷಿಕ ಮೆಚ್ಚಿಗೆ ಬಿದಿರು ಹಿಡಿಯುವ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಯಾವುದೇ ತೊಂದರೆಯಾಗದಂತೆ ಶ್ರೀ ಮಹಾಕಾಳಿ ಅಮ್ಮನವರು ನಮ್ಮನ್ನು ಕಾಪಾಡಿದ್ದಾರೆ.
- ವೆಂಕಪ್ಪ ಪೂಜಾರಿ ಮರುವೇಲು
- ಸದಸ್ಯರು, ವ್ಯವಸ್ಥಾಪನಾ ಸಮಿತಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿ
✍🏻 ದೀಪಕ್ ಉಬಾರ್, ಉಪ್ಪಿನಂಗಡಿ