ಪುತ್ತೂರು: ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ಅನುದಾನ ನೀಡಿರುವ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸಿ, ವಿಪಕ್ಷಗಳ ಅಪಸ್ವರಕ್ಕೆ ಶಾಸಕ ಅಶೋಕ್ ರೈ ಅವರು ಖಡಕ್ ಉತ್ತರ ನೀಡಿದ್ದಾರೆ.
ಮಾ.19ರಂದು ಅಧಿವೇಶನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರಿನಲ್ಲಿ ಅಡಿಕೆ ಕೃಷಿ ಹಳದಿ ರೋಗಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಸರಕಾರ ಯಾವುದೇ ಪರಿಹಾರ ನೀಡಿಲ್ಲ. ಅದರೆ ನಮ್ಮ ಸರಕಾರ ಈ ಬಾರಿ ಬಜೆಟ್‌ನಲ್ಲಿ ರೂ. 62 ಕೋಟಿ ಅನುದಾನ ಇರಿಸಿದೆ. ಅದೇ ರೀತಿ ಪಶುಸಂಗೋಪನಾ ಇಲಾಖೆಗೆ ಸಂಬಂಧಿಸಿ ಕೊಯಿಲದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೂ.100 ಕೋಟಿ ಅನುದಾನ ಇಟ್ಟು ಕಾಲೇಜನ್ನು ನಿರ್ಮಾಣ ಮಾಡಿಸಿದ್ದರು. ಆದರೆ ನಂತರ ಬಂದ ಬಿಜೆಪಿ ಸರಕಾರ 1 ರೂಪಾಯಿಯನ್ನೂ ನೀಡದೆ 5 ವರ್ಷದಲ್ಲಿ ಕಟ್ಟಡದಲ್ಲಿ ನಾಲ್ಕು ಇಂಚು ಧೂಳು ತುಂಬಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ರೂ. 24 ಕೋಟಿ ಹಣ ಮಂಜೂರು ಮಾಡಿದ್ದಾರೆ. ಮೀನುಗಾರಿಕೆಗೆ ಸಂಬಂಧಿಸಿ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿ ಮೀನುಗಾರಿಕೆ ರಸ್ತೆಗಳ ಅಭಿವೃದ್ಧಿಗೆ ರೂ. 30 ಕೋಟಿ, ಮೀನುಗಾರಿಕೆ ವಾಹನ ಖರೀದಿಗೆ ರೂ.3ಲಕ್ಷ ಸಬ್ಸಿಡಿ, ಮೈಸೂರಿನಲ್ಲಿ ಹೈಟೆಕ್ ಮೀನಿನ ಸಂಸ್ಕರಣಾ ಕೇಂದ್ರ, ಮಲ್ಪೆಯಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್‌ಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಇರಿಸಿದ್ದಾರೆ. ಕೆಪಿಸಿಯ 500 ಶಾಲೆಗಳಿಗೆ ರೂ. 2,500 ಕೋಟಿ ರೂಪಾಯಿ ಇರಿಸಿದ್ದಾರೆ ಎಂದು ಹೇಳಿದ ಅವರು ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯವರ ಪರವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಿಪಕ್ಷಗಳಿಂದ ಅಪಸ್ವರ:
ಈ ನಡುವೆ ವಿಪಕ್ಷದ ಸದಸ್ಯರಿಂದ ಯಾವುದೇ ಅನುದಾನ ಇರಿಸಿಲ್ಲ ಎಂಬ ಅಪಸ್ವರ ಬಂತು. ಇದಕ್ಕೆ ಆಕ್ರೋಶಗೊಂಡ ಶಾಸಕ ಅಶೋಕ್ ಕುಮಾರ್ ರೈ ನೀವು ಬಜೆಟ್ ಪುಸ್ತಕ ಸರಿಯಾಗಿ ಓದಿ. ಅದರಲ್ಲಿ ಎಲ್ಲವೂ ಇದೆ ಎಂದ ಅವರು ಇಷ್ಟೊಂದು ಅಪಸ್ವರ ಎತ್ತುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಿಗೆ ನಾನೊಂದು ಪ್ರಶ್ನೆ ಹಾಕುತ್ತೇನೆ. ಈ ಹಿಂದೆ ಬಿಜೆಪಿ ಸರಕಾರ ಇತ್ತು. 5 ವರ್ಷದಲ್ಲಿ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಹುಡುಕಿ ಕೊಡಿ. ದುರ್ಬಿನು ಇಟ್ಟರು ಹೆಸರು ಸಿಗುತ್ತಿಲ್ಲ. ಪುತ್ತೂರು, ಮಂಗಳೂರಿನ ಹೆಸರೇ ಇಲ್ಲ. ಎಷ್ಟು ಸಲ ಮಂಗಳೂರಿನ ಹೆಸರು ಬಂದಿದೆ ಹೇಳಿ ಎಂದು ಪ್ರಶ್ನಿಸಿದರಲ್ಲದೆ ನಮ್ಮ ಸರಕಾರ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹೆಸರು 23 ಸಲ ಬಂದಿದೆ ಎಂದರು.
ದೇವಸ್ಥಾನದ ಜಾಗ ದೇವರ ಹೆಸರಿಗೆ ಆಗಬೇಕು
ಸರಕಾರಿ ಜಾಗದಲ್ಲಿರುವ ದೇವಸ್ಥಾನ, ಚರ್ಚ್ ಮಸೀದಿ, ಭಜನಾ ಮಂದಿರ, ದೈವಸ್ಥಾನವನ್ನು ದೇವಸ್ಥಾನದ ಹೆಸರಿನಲ್ಲಿ ಮಾಡಲು ಬಹಳ ಹಿಂದಿನಿಂದಲೂ ಬೇಡಿಕೆ ಇತ್ತು. 5 ವರ್ಷದಲ್ಲಿ ಧರ್ಮದ ಬಗ್ಗೆ ಭಾಷಣ ಮಾಡಿದ ಬಿಜೆಪಿ ಇದನ್ನು ಮಾಡಿಲ್ಲ. ಹಾಗಾಗಿ ಇವತ್ತು ಎಷ್ಟೋ ದೇವಸ್ಥಾನದ ಜಾಗ ಈಗ ಅತಿಕ್ರಮಣ ಆಗಿದೆ. ದೇವಸ್ಥಾನ, ಚರ್ಚ್ ಮಸೀದಿ, ಭಜನಾ ಮಂದಿರ, ದೈವಸ್ಥಾನದ ಜಾಗವನ್ನು ಮುಂದಿನ ದಿವಸದಲ್ಲಾದರೂ ನಮ್ಮ ದೇವರ ಹೆಸರಿಗೆ ಮಾಡಿಸಬೇಕೆಂದು ಮನವಿ ಮಾಡಿದರು. ಇದರ ಜೊತೆಗೆ ಕುಮ್ಕಿ ಜಾಗದಲ್ಲಿ ಕೃಷಿ ಮಾಡಿದ ರೈತರ ಹೆಸರಿಗೆ ಕುಮ್ಕಿ ಜಾಗ ಮಾಡಬೇಕು. ತುಳುವನ್ನು ಕರ್ನಾಟಕ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕು. ದೇವಸ್ಥಾನದ ಅಭಿವೃದ್ಧಿಗಾಗಿ ಟೂರಿಸಮ್ ಮಾಡಲು ಹೆಚ್ಚು ಅನುದಾನ ಕೊಡಬೇಕೆಂದು ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
5 ವರ್ಷ ಮೆಡಿಕಲ್ ಕಾಲೇಜು ಫೈಲ್ ಧೂಳು ಹಿಡಿದಿತ್ತು
ಅಶೋಕ್ ರೈ ಅವರು ಅಧ್ಯಕ್ಷರ ಸೂಚನೆಯಂತೆ ಮಾತು ಮುಂದುವರಿಸಿ ಬಜೆಟ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಅತಿಥಿ ಶಿಕ್ಷಕರಿಗೆ, ಬಿಸಿಯೂಟ ನೌಕರರಿಗೆ ಗೌರವ ಧನ ಹೆಚ್ಚಳ, ಸೌಟ್ಸ್,ಗೈಡ್ಸ್‌ಗೆ ಅನುದಾನ ಕುರಿತು ಉಲ್ಲೇಖಿಸಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಶಕುಂತಳಾ ಶೆಟ್ಟಿಯವರು ಶಾಸಕಿಯಾಗಿದ್ದ ಸಂದರ್ಭ 40 ಎಕ್ರೆ ಜಾಗವನ್ನು ಕಾದಿರಿಸಿದ್ದರು. ಆದರೆ ಬಳಿಕ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ 5 ವರ್ಷ ಆ ಫೈಲ್ ಧೂಳು ಹಿಡಿದಿತ್ತು. ಈಗ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ ಎಂದರು. ಈ ವೇಳೆ ವಿಪಕ್ಷದಿಂದ ಮೆಡಿಕಲ್ ಕಾಲೇಜು ಪ್ರಸ್ತಾಪ ಮಾತ್ರ ಅನುದಾನ ಇಡಲಿಲ್ಲ ಎಂದು ಪ್ರಸ್ತಾಪಗೊಂಡಾಗ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ನಮಗೆ ಮೆಡಿಕಲ್ ಕಾಲೇಜಿಗೆ ಹೇಗೆ ಅನುದಾನ ತರಿಸಬೇಕೆಂದು ಗೊತ್ತಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಏನಾದರೂ ಇದ್ದರೆ ಮಾತನಾಡಿ. ನಮ್ಮ ಕ್ಷೇತ್ರದ ಬಗ್ಗೆ ದಯಮಾಡಿ ಮಾತನಾಡಬೇಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.