ಅಡೂರು: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರವೆನಿಸಿದ ಅಡೂರು ಕ್ಷೇತ್ರದ ಜಾತ್ರೋತ್ಸವ ಸಂದರ್ಭ ಕ್ಷೇತ್ರದ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಲೇಖಕ, ವಿಮರ್ಷಕ ವೆಂಕಟ್ರಾಂ ಭಟ್ ಅವರಿಗೆ ಸನ್ಮಾನ ಪತ್ರವನ್ನಿತ್ತು ಅಭಿನಂದಿಸಲಾಯಿತು.
ಕ್ಷೇತ್ರದ ಉತ್ಸವ ಸಮಿತಿಯ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಶುಭ ಹಾರೈಸಿದರು. ಹಿರಿಯ ಭಾಗವತ ಯಕ್ಷ ಗುರು ವಿಶ್ವ ವಿನೋದ ಬನಾರಿ ಅವರು ನೆನಪಿನ ಕಾಣಿಕೆ ಮತ್ತು ಫಲ ಪುಷ್ಪಗಳನ್ನು ಹಾಗೂ ಕ್ಷೇತ್ರದ ಪ್ರಸಾದ ನೀಡಿ ಗೌರವಾರ್ಪಣೆ ಸಲ್ಲಿಸಿದರು.
ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ವಾಗ್ಮಿ ಬೆಳ್ಳಿಪ್ಪಾಡಿ ಸದಾಶಿವ ರೈ ಅರ್ಥದಾರಿ ವೇಷಧಾರಿ- ವಿಮರ್ಶಕ ವೆಂಕಟ್ರಾಂ ಭಟ್ ಅವರು ಸುಳ್ಯದಲ್ಲಿ ಮಕ್ಕಳಿಗಾಗಿ ಪ್ರತಿಭಾ ವಿದ್ಯಾಲಯವನ್ನು ನಡೆಸುತ್ತಿದ್ದು, ಯಕ್ಷಗಾನ ರಂಗಭೂಮಿಯಲ್ಲಿ ಮಾತ್ರವಲ್ಲ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಪ್ರತಿಭಾನ್ವಿತ ವ್ಯಕ್ತಿ ಎಂದು ಅವರೊಂದಿಗಿನ 40 ವರ್ಷದ ಒಡನಾಟವನ್ನು ಮೆಚ್ಚಿಗೆಯಿಂದ ನೆನಪಿಸಿಕೊಂಡರು.
ಸನ್ಮಾನಕ್ಕೆ ಉತ್ತರಿಸಿದ ವೆಂಕಟ್ರಾಂ ಭಟ್ ಅವರು ಯಕ್ಷಗಾನ ಹಾಗೂ ಅಡೂರು ಕ್ಷೇತ್ರದ ಪರಿಸರದಲ್ಲಿ ಬೆಳೆದ ಯಕ್ಷಗಾನ ಕಲಾಕ್ಷೇತ್ರ ಹಲವು ವಿದ್ವಾಂಸರನ್ನು ನೆನಪಿಸುತ್ತಾ ಜಾತ್ರೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನನ್ನನ್ನು ಗೌರವಿಸಿ ಅಭಿನಂದಿಸಿರುವುದಕ್ಕೆ ಹಾಗೂ ಧಾರ್ಮಿಕ ರಂಗದ ಮಿತ್ರ ಸದಾಶಿವ ರೈ ಅವರ ಪ್ರೀತಿ ವಿಶ್ವಾಸಕ್ಕೆ ಅಭಾರಿ ಎಂದು ಮೆಚ್ಚುಗೆ ಸೂಚಿಸಿದರು.
ಉತ್ಸವ ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿದರು. ಪ್ರಸಿದ್ಧ ಕಲಾವಿದರ ಭಾಗಾಹಾರದೊಂದಿಗೆ ‘ಭೀಷ್ಮಸೇನಾಧಿಪತ್ಯ’ ಯಕ್ಷಗಾನ ತಾಳಮದ್ದಳೆ ನಡೆದು ಜನಮನ ರಂಜಿಸಿತು. ಸಾಂಸ್ಕೃತಿಕ ಸಮಿತಿಯ ಸದಸ್ಯ ವಿವೇಕ ಅಡೂರು ವಂದಿಸಿದರು.