ಪುತ್ತೂರು: ಒಳಮೊಗ್ರು ಗ್ರಾಮದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಮ್ಮನ್ನಗಲಿದ ಮೂವರು ಗಣ್ಯರಿಗೆ ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಮಾ.26 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸುವ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಚಂದ್ರಕಾಂತ ಶಾಂತಿವನ, ಕುಂಬ್ರದ ಹಿರಿಯ ವರ್ತಕ, ಅರ್ಚನಾ ಕಾಂಪ್ಲೆಕ್ಸ್ ಮಾಲಕ, ಹಿರಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಬಾಬು ಪೂಜಾರಿ ಬಡಕ್ಕೋಡಿ ಹಾಗೂ ಬಿಜೆಪಿ ಹಿರಿಯ ಕಾರ್ಯಕರ್ತ ಗೋವಿಂದಮೂಲೆ ಬಾಲಕೃಷ್ಣ ರೈಯವರುಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇವರು ಕೊಟ್ಟಿರುವ ಆಯುಷ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ಅಗಲಿದ ಈ ಮೂವರು ವ್ಯಕ್ತಿಗಳು ಅತ್ಯಂತ ಪ್ರಾಮಾಣಿಕರು, ಕರ್ತವ್ಯವೇ ದೇವರೆಂದು ತಿಳಿದವರು.ಅಗಲಿದ ಆತ್ಮಗಳಿಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿ ನುಡಿ ನಮನ ಸಲ್ಲಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ಸಂಗತಿ. ಅವರ ಮಾಡಿರುವ ಸೇವೆಯನ್ನು ನೆನಪಿಟ್ಟುಕೊಂಡು ಅವರ ಆತ್ಮಕ್ಕೆ ಶ್ರದ್ದಾಂಜಲಿ ಅರ್ಪಿಸುವ ಕೆಲಸವನ್ನು ಶಕ್ತಿಕೇಂದ್ರದ ವತಿಯಿಂದ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ. ದೇವರ ಆತ್ಮಗಳಿಗೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಮೂರು ಒಳ್ಳೆಯ ಮನಸ್ಸುಗಳನ್ನು ನಾವು ಕಳೆದುಕೊಂಡಿದ್ದೇವೆ. ಇದು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಈ ಸಮಾಜಕ್ಕೆ ಮಾಡಿರುವ ಸೇವೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಭಗವಂತ ಅವರುಗಳ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಮೂರು ಶಕ್ತಿಗಳನ್ನು ಗ್ರಾಮ ಕಳೆದುಕೊಂಡಿದೆ. ಜ್ಯೂಸ್ ಬಾಬಣ್ಣ ಆಗಲಿ, ಚಂದ್ರಕಾಂತ್ ಆಗಲಿ, ಬಾಲಕೃಷ್ಣ ರೈಯವರೇ ಆಗಲಿ ಎಲ್ಲರೂ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿದ್ದರು ಎಂದು ಹೇಳಿ ನುಡಿ ನಮನ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಛಾದ ಅಧ್ಯಕ್ಷ ಹರೀಶ್ ಬಿಜತ್ರೆ, ನೆಟ್ಟಣಿಗೆ ಮುಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕಿ ಉಷಾ ನಾರಾಯಣ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯೆ ರೇಖಾ ಯತೀಶ್, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ರಾಮಯ್ಯ ಗೌಡ ಬೊಳ್ಳಾಡಿ, ಕರುಣಾ ರೈ ಬಿಜಳ, ಆನಂದ ರೈ ಡಿಂಬ್ರಿ, ವಿಶ್ವನಾಥ ರೈ ಕೊಡಿಬೈಲ್ ಸೇರಿದಂತೆ ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಎಲ್ಲಾ ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು, ಸಿ ಎ ಬ್ಯಾಂಕ್ ನಿರ್ದೇಶಕರುಗಳು ಅಲ್ಲದೆ ಬಾಬು ಪೂಜಾರಿ ಬಡಕ್ಕೋಡಿ, ಗೋವಿಂದಮೂಲೆ ಬಾಲಕೃಷ್ಣ ರೈ ಹಾಗೂ ಚಂದ್ರಕಾಂತ ಶಾಂತಿವನರವರ ಮನೆಯವರು ಉಪಸ್ಥಿತರಿದ್ದರು. ಟೆಲಿಕಾಂ ಸಲಹಾ ಸಮಿತಿಯ ಜಿಲ್ಲಾ ಸದಸ್ಯ ನಿತೀಶ್ ಕುಮಾರ್ ಶಾಂತಿವನ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ವಂದಿಸಿದರು. ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಮೂವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಯ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.