ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ದಿನದ 24 ಗಂಟೆಯೂ ನೀರು ಪೂರೈಕೆ ಮಾಡುವಲ್ಲಿ ಈಗ ಮಾಡಿಕೊಂಡಿರುವ ವ್ಯವಸ್ಥೆ ಸಮರ್ಪಕವಾಗಿ ಇಲ್ಲ, ಇದನ್ನು ಬದಲಾಯಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಪರ ಕಾರ್ಯದರ್ಶಿ ಅಂಜು ಪರ್ವೆಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸುಮಾರು 49 ನೀರಿನ ಬ್ಯಾಂಕ್ ಗಳಿಗೆ ನೀರು ಪೂರೈಕೆ ಮಾಡುವ ಯೋಜನೆಯನ್ನು ಸರಕಾರ ಜಾರಿ ಮಾಡಿತ್ತು. ಆದರೆ ಇದರ ಬದಲಾಗಿ ಕಾಮಗಾರಿಯಲ್ಲಿ ಬದಲಾವಣೆ ಮಾಡಿ 3.5 ಲಕ್ಷ ಲೀಟರ್ ಸಾಮರ್ಥ್ಯದ ಒಂದೇ ಟ್ಯಾಂಕ್‌ಗೆ ನೀರು ತುಂಬಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದು ವಿಟ್ಲ ಪಟ್ಟಣ ಪಂಚಾಯತ್ ಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಲೋಪವನ್ನು ಸೃಷ್ಟಿಸುತ್ತದೆ. ಈ ಹಿಂದೆ ಡಿ.ಪಿ.ಎ.ಆರ್‌ನಲ್ಲಿ ತಿಳಿಸಿರುವಂತೆ 49 ನೀರಿನ ಟ್ಯಾಂಕ್‌ಗಳಿಗೆ ನೀರು ಪೂರೈಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಲ್ಲಿ ವಿಟ್ಲ ಪಟ್ಟಣ ಪಂಚಾಯತಿಗೆ ಸಮಗ್ರವಾಗಿ ನೀರು ಪೂರೈಸಲು ಸಾಧ್ಯವಾಗಲಿದೆ.ಆದ್ದರಿಂದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೀರಿನ ಬ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲು ಬೇಕಾಗುವಂತಹ ಅನುದಾನವನ್ನು ಇದೇ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಶಾಸಕರು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನಿಯರ್ ಎಜಾಜ್‌ಹುಸೇನ್ ಜೊತೆಯೂ ಶಾಸಕರು ಮಾತುಕತೆ ನಡೆಸಿದರು.
ವಿಟ್ಲ ಪಟ್ಟಣ ಪಂಚಾಯತ್‌ಗೆ ಕುಡಿಯುವ ನೀರಿನ ಸರಬರಾಜಿಗೆ 100 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಈ ಯೋಜನೆಯನ್ವಯ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೆ 3.5 ಲಕ್ಷ ಲೀಟರ್‌ನ ಟ್ಯಾಂಕ್ ನಿರ್ಮಾಣ ಮಾಡಿ ಅದರ ಮೂಲಕ ನೀರು ಪೂರೈಕೆ ಮಾಡಲು ಯೋಜನೆ ಸಿದ್ದಪಡಿಸಲಾಗಿತ್ತು. ಈ ಯೋಜನೆಯಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಅಸಾದ್ಯ. ವ್ಯಾಪ್ತಿಯ ಸುಮಾರು 49 ಟ್ಯಾಂಕ್‌ಗೆ ನೀರು ತುಂಬಿಸಿ ಅದರ ಮೂಲಕ ಎಲ್ಲಾ ಮನೆಗಳಿಗೂ ನೀರು ಪೂರೈಕೆ ವ್ಯವಸ್ಥೆ ಮಾಡುವಂತೆ ಯೋಜನೆಯಲ್ಲಿ ಬದಲಾವಣೆ ಮಾಡುವಂತೆ ಇಲಾಖೆಯ ಗಮನಕ್ಕೆ ತಂದಿದ್ದೇನೆ. 100 ಕೋಟಿ ಖರ್ಚು ಮಾಡಿ ಪ್ರತೀ ಮನೆಗೆ ನೀರು ಬಂದಿಲ್ಲ ಅಂದ್ರೆ ವ್ಯವಸ್ಥೆ ಯಿಂದ ಏನು ಪ್ರಯೋಜನ? ಈ ಕಾರಣಕ್ಕೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ 49 ಟ್ಯಾಂಕ್‌ಗೂ ನೀರು ಸರಬರಾಜು ಆದರೆ ಮಾತ್ರ ಯೋಜನೆ ಸಕ್ಸಸ್ ಆಗುತ್ತದೆ. ಆ ಕೆಲಸವನ್ನು ನಾನು ಮಾಡುತ್ತೇನೆ.
ಅಶೋಕ್ ರೈ ಶಾಸಕರು , ಪುತ್ತೂರು