ಪುತ್ತೂರು: ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ವೆಬ್‌ಸೈಟ್ ಅನಾವರಣ, ಕೃಷಿಕಾರಿಗಾಗಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆಯ ಲೋಕಾರ್ಪಣೆ ಮತ್ತು ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮ ಮಾ.29ರಂದು ಜಿ.ಎಲ್. ರೋಟರಿ ಸಭಾಭವನದಲ್ಲಿ ನಡೆಯಿತು.
ವೆಬ್‌ಸೈಟ್ ಅನಾವರಣಗೊಳಿಸಿ, ಜೇನುಕೃಷಿ ಸಾಧಕರನ್ನು ಸನ್ಮಾನಿಸಿದ ಶಾಸಕ ಅಶೋಕ್ ಕುಮಾರ ರೈ ಮಾತನಾಡಿ, ಜೇನಿನ ಬಳಕೆ ವ್ಯಾಪಕವಾಗಿ ಹೆಚ್ಚಾಗುವಂತೆ ಸರಕಾರದ ಮಟ್ಟದಲ್ಲಿ ಹೆಚ್ಚಿನ ವ್ಯವಸ್ಥೆಯನ್ನು ಜಾರಿಗೊಳಿಸಿ, ಜೇನು ಕೃಷಿಕರಿಗೆ ಉತ್ತಮ ಮಾರುಕಟ್ಟೆ ಲಭಿಸುವಂತ ಕಾರ್ಯವು ರೈತ ಉತ್ಪಾದಕ ಸಂಸ್ಥೆಯ ಮೂಲಕ ಆಗಬೇಕಿದೆ. ಸಿಹಿಗೆ ಸಕ್ಕರೆ ಬಳಕೆಯ ಬದಲಾಗಿ ಜೇನಿನ ಬಳಕೆ ಮಾಡಬೇಕು. ವಿಶೇಷವಾಗಿ ಮಕ್ಕಳಿಗೆ ಕೊಡುವ ಹಾಲಿಗೆ ಜೇನಿನ ಬಳಕೆಯಿಂದ ಹಾಲನ್ನು ಹೆಚ್ಚು ಪೌಷ್ಟಿಕವಾಗಿಸಬಹುದು ಎಂದ ಶಾಸಕರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಸಹಾಯ ಸಹಕಾರದ ಅಗತ್ಯವಿದ್ದಲ್ಲಿ ಮಾಡುವುದಾಗಿ ಭರವಸೆ ನೀಡಿದರು.
ದ.ಕ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಮಂಜುನಾಥ್ ಡಿ. ಮಾತನಾಡಿ, ಜೇನು ಕೃಷಿಗೆ ಸರಕಾರದಿಂದ ಇರುವ ಸವಲತ್ತುಗಳು, ಜೇನು ಕೃಷಿಯ ರೈತ ಉತ್ಪಾದಕ ಸಂಸ್ಥೆಯ ಮೂಲಕ ದೊರೆಯಬಹುದಾದ ಸೇವೆಗಳು ಮತ್ತು ಕರ್ನಾಟಕ ಸರಕಾರದ ಜೇನಿನ ಝೇಂಕಾರ ಬ್ರಾಂಡ್ ಬಗ್ಗೆ ಮಾಹಿತಿ ನೀಡಿದರು. ಗ್ರಾಮಜನ್ಯದ ಅಧ್ಯಕ್ಷ ಮೂಲಚಂದ್ರ ಮಾತನಾಡಿ, ಜೇನು ಕೃಷಿಯ ಮಹತ್ವ ಮತ್ತು ತಮ್ಮ ಸಂಸ್ಥೆಯ ಬದ್ಧತೆಯ ತಿಳಿಸಿದರು.
ಖ್ಯಾತ ವಕೀಲ ಮಹೇಶ್ ಕಜೆ, ತೋಟಗಾರಿಕಾ ಉಪ ನಿರ್ದೇಶಕರು ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದ ಈ ಸುಂದರ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜೇನು ಕೃಷಿಕರನ್ನು ಗೌರವಿಸಲಾಯಿತು. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಸದಸ್ಯರು, ಸಿಬ್ಬಂದಿಗಳು ಮತ್ತು ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.