ಪುತ್ತೂರು: ಕಳೆದ 9 ವರ್ಷಗಳಿಂದ ಬೊಳುವಾರು ವಿಶ್ವಕರ್ಮ ಸಭಾ ಭವನದ ಬಳಿಯಿರುವ ಗಣೇಶ್ ಪ್ರಸಾದ್ ಬಿಲ್ದಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕಾಶ್ ಕೋಚಿಂಗ್ ಮತ್ತು ಕೌನ್ಸಿಲಿಂಗ್ ಸೆಂಟರ್ ಅದರ ಬಳಿಯುರುವ ಶಾರ್ಕ್ ಟವರ್ಸ್ನಲ್ಲಿ ವಿಶಾಲ ಹಾಗೂ ವಿಸ್ತಾರಗೊಂಡು ಶುಭಾರಂಭಗೊಂಡಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಅಂಕ ಪಡೆಯುವ ಯಂತ್ರಗಳಾಗಬಾರದು. ಕೇವಲ ಅಂಕ ಗಳಿಕೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಒಂದು ಅಂಕ ಕಡಿಮೆಯಾದಾಗ ಚಿಂತಿಸಬಾರದು. ಸಣ್ಣ ಪುಟ್ಟ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದೇ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಮುದ್ದು ಮಾಡಿ ಬೆಳೆಸಿದ ಪೋಷಕರಿಗೆ ನೋವುಂಟು ಮಾಡಬಾರದು. ನಿಮಗಾದ ನೋವನ್ನು ಮನಸ್ಸುನಲ್ಲಿಟ್ಟುಕೊಳ್ಳುವುದು ಅಪಾಯ. ಪೋಷಕರಲ್ಲಿ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಶಿಕ್ಷಕರಲ್ಲಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಎದುರಿಸುವ ಶಕ್ತಿ, ಧೈರ್ಯವಿರಬೇಕು. ಸಮಾಜವನ್ನು ಎದುರಿಸಿ ಗೆಲ್ಲುವ ಶಕ್ತಿ ಹೊಂದಿರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು ಆಕಾಶ್ ಕೋಚಿಂಗ್ ಮತ್ತು ಕೌನ್ಸಿಲಿಂಗ್ ಸೆಂಟರ್ ಮಕ್ಕಳ ಭವಿಷ್ಯಕ್ಕೆ ಹೊಸ ರೂಪುಕೊಡುವಲ್ಲಿ ಸಹಕಾರಿಯಾಗಲಿ ಎಂದರು.
ಸಂಸ್ಥೆಯ ಮುಖ್ಯಸ್ಥೆ ನಾಗಶ್ರೀ ಐತಾಳ್ ಮಾತನಾಡಿ, ಕೋಚಿಂಗ್ ಮತ್ತು ಟ್ಯೂಷನ್ ಪದಗಳಿಗೆ ವ್ಯತ್ಯಾಸಗಳಿದೆ. ಟ್ಯೂಷನ್ ತರಗತಿಯಲ್ಲಿ ಕಲಿಸಿದ ಪಾಠಗಳನ್ನು ಮತ್ತೆ ಬೋಧಿಸಲಾಗುತ್ತದೆ. ಆದರೆ ಕೋಚಿಂಗ್ ಕ್ಲಾಸ್ನಲ್ಲಿ ಹೊಸತವನ್ನು ಕಲಿಸಲಾಗುತ್ತಿದೆ. ಮಕ್ಕಳ ಉನ್ನತ ಮಟ್ಟದ ಕಲಿಕೆಗೆ ಪೂರಕವಾದ ತರಗತಿಗಳನ್ನು, ಸಿಇಟಿ ತರಗತಿಗಳನ್ನು ಕೋಚಿಂಗ್ ಸೆಂಟರ್ಗಳಲ್ಲಿ ಮಾತ್ರ ನೀಡಲಾಗುತ್ತದೆ. ಮಕ್ಕಳ ಬುದ್ದಿ ಶಕ್ತಿ ಬೆಳವಣಿಗೆಗೆ ಇನ್ನಷ್ಟು ಪೂರಕ ತರಗತಿಗಳನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಕಾಶ್ ಕೋಚಿಂಗ್ ಮತ್ತು ಕೌನ್ಸಿಲಿಂಗ್ ಸೆಂಟರ್ ಇನ್ನಷ್ಟು ವಿಸ್ತಾರಗೊಂಡು ಆರಂಭಗೊಂಡಿದೆ. ಕಳೆದ 9 ವರ್ಷಗಳಲ್ಲಿ ಮಕ್ಕಳ ಹಾಗೂ ಪೋಷಕರ ಸಹಕಾರ ದೊರೆತಿದೆ ಎಂದರು.
ತೆರಿಗೆ ಇಲಾಖೆ ಅಧಿಕಾರಿ ಗಂಗಾಧರ ರೈ, ನ್ಯಾಯವಾದಿ ಸೀಮಾ ನಾಗರಾಜ್, ಏಸ್ ಮೊಬೈಕ್ಸ್ ಮ್ಹಾಲಕ ಆಕಾಶ್ ಐತಾಳ್, ಆಕಾಂಕ್ಷ ಐತಾಳ್, ಮಕ್ಕಳು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.