ಸತೀಶ್ ರೈಯವರಲ್ಲಿ ನಾಯಕತ್ವ ಗುಣವಿತ್ತು; ವಿನಯಕುಮಾರ್ ಸೊರಕೆ
ನೆಲ್ಯಾಡಿ: ಅನಾರೋಗ್ಯದಿಂದ ಮಾ.19ರಂದು ನಿಧನರಾದ ಕೊಣಾಲುಗುತ್ತು ಸತೀಶ್ ರೈಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಮಾ.30ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಮಾಜಿ ಸಂಸದ, ಮಾಜಿ ಸಚಿವರೂ ಆದ ವಿನಯಕುಮಾರ್ ಸೊರಕೆ ಅವರು ನುಡಿನಮನ ಸಲ್ಲಿಸಿ, ನಾನು ಶಾಸಕನಾಗಿದ್ದ ವೇಳೆ ಸತೀಶ್ ರೈಯವರು ನೆಲ್ಯಾಡಿ ಮಂಡಲ ಪಂಚಾಯತ್ ಸದಸ್ಯರಾಗಿ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ನನ್ನೊಂದಿಗೆ ಅವರು ಆತ್ಮೀಯ ಸಂಬಂಧವಿರಿಸಿಕೊಂಡಿದ್ದರು. ನೇರ, ದಿಟ್ಟ ನಡೆ ನುಡಿಯ ಸತೀಶ್ ರೈಯವರಲ್ಲಿ ನಾಯಕತ್ವ ಗುಣವಿತ್ತು. ಕುಟುಂಬದಲ್ಲಿ ಕಿರಿಯವನಾಗಿದ್ದರೂ ತಾನೇ ಮುಂದೆ ನಿಂತು ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ದೈವ ಭಕ್ತರೂ ಆಗಿದ್ದ ಸತೀಶ್ ರೈಯವರು ಧಾರ್ಮಿಕ ಮುಖಂಡರಾಗಿ ದೈವಸ್ಥಾನಗಳ ಜೀರ್ಣೋದ್ದಾರ ಕೆಲಸವನ್ನೂ ಮಾಡಿದ್ದರು. ಅಪಾರ ಸಂಖ್ಯೆಯಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದರು. ಒಟ್ಟಿನಲ್ಲಿ ಅವರಲ್ಲಿ ನಾಯಕತ್ವ ಗುಣವಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದರು ಎಂದರು. ದೈವಾರಾಧನೆಯನ್ನೂ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ಮಕ್ಕಳಿಗೆ ಸಂಸ್ಕಾರ, ಉತ್ತಮ ಶಿಕ್ಷಣವನ್ನೂ ನೀಡಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿ ಮೃತರಾದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆ ನೋವು ನಿವಾರಿಸುವ ಶಕ್ತಿಯನ್ನು ಮಕ್ಕಳಿಗೆ, ಕುಟುಂಬಕ್ಕೆ ನೀಡಲಿ ಎಂದರು.
ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸಂಚಾಲಕ ಸೀತಾರಾಮ ರೈ ಸವಣೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ ನೆಲ್ಯಾಡಿ, ಪಿ.ಪಿ.ವರ್ಗೀಸ್ ಕಡಬ, ಕೃಷ್ಣ ಶೆಟ್ಟಿ ಕಡಬ, ತಾ.ಪಂ.ಮಾಜಿ ಸದಸ್ಯರಾದ ಉಷಾ ಅಂಚನ್, ಪುಲಸ್ತ್ಯ ರೈ ಕಡಬ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಬೆಳ್ಳಿಪ್ಪಾಡಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಬಿಜಾಪುರ ತಹಶೀಲ್ದಾರ್ ಪ್ರದೀಪ್, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಎಸಿಎಫ್ ಪ್ರವೀಣ್ ಶೆಟ್ಟಿ, ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ಪ್ರಮುಖರಾದ ರಾಧಾಕೃಷ್ಣ ರೈ ಬೂಡಿಯಾರು, ರಾಧಾಕೃಷ್ಣ ಆಳ್ವ ಸಾಜ, ಶಿವರಾಮ ಆಳ್ವ, ಮಾರಪ್ಪ ರೈ ಬೈಲು, ಪ್ರಸನ್ನ ಶೆಟ್ಟಿ ಸಿಝ್ಲರ್, ಡಾ.ರಘು ಬೆಳ್ಳಿಪ್ಪಾಡಿ, ಡಾ.ಶೌರಿ ರೈ ಉಪ್ಪಿನಂಗಡಿ, ಡಾ.ಯತೀಶ್ ರೈ ಉಪ್ಪಿನಂಗಡಿ, ಡಾ.ನಿರಂಜನ್ ರೈ ಉಪ್ಪಿನಂಗಡಿ, ಡಾ.ರಾಜಾರಾಮ್ ಕೆ.ಬಿ.ಉಪ್ಪಿನಂಗಡಿ, ನ್ಯಾಯವಾದಿ ಎ.ಸಿ.ಜಯರಾಜ್, ಕೆಪಿಸಿಸಿ ಮಾಜಿ ಸದಸ್ಯ ಕೆ.ಪಿ.ತೋಮಸ್ ಸಹಿತ ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು, ಸತೀಶ್ ರೈಯವರ ಸಂಬಂಧಿಕರು, ಕುಟುಂಬಸ್ಥರು, ಹಿತೈಷಿಗಳ ಸಹಿತ ಹಲವು ಮಂದಿ ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಮೃತರ ಪತ್ನಿ ಚಿತ್ರಾ ಎಸ್.ರೈ ಗೌರಿಕೋಡಿ, ಪುತ್ರ ಪ್ರತೀಕ್ಷ್ ಶೆಟ್ಟಿ, ಪುತ್ರಿ ಅಪೇಕ್ಷಾ, ಸಹೋದರರಾದ ವಿಶ್ರಾಂತ ಪ್ರಾಂಶುಪಾಲ ಕೊಣಾಲುಗುತ್ತು ವಿಠಲ ರೈ ಆಲಂಕಾರು, ಕೊಣಾಲುಗುತ್ತು ಶ್ರೀಧರ್ ರೈ ಮುಂಬೈ, ನಾದಿನಿಯರಾದ ಹೇಮಾ ವಿ.ರೈ, ವಿಜಯ ಎಸ್.ರೈ. ಸಹೋದರಿಯರಾದ ಸೀತಾವಿಠಲ ಮಾರ್ಲ ಬಲ್ಯ, ಲೀಲಾಸಂಜೀವ ಶೆಟ್ಟಿ ಅಕ್ಷೋಭ್ಯಾ ಹೊಸಮಠ ಫಾರ್ಮ್ಸ್ ಕಡಬ, ಭವಾನಿಶಂಕರಿ ಮಂಜಯ್ಯ ಭಂಡಾರಿ ಕಡೆಂಜ, ಅಳಿಯ ಪ್ರಶಾಂತ್ ರೈ ಅರಂತಬೈಲು ಹಾಗೂ ಕುಟುಂಬಸ್ಥರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಂಗನಾಥ ರೈ ಬೆಳಿಯೂರುಗುತ್ತುರವರು ಸತೀಶ್ ರೈಯವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ೧ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.