ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆ

0

ಆಕ್ಷೇಪಣೆ ಬರದೇ ಇದ್ದಲ್ಲಿ ಹಸಿಮೀನು ಮಾರಾಟದ ಹಕ್ಕು 1 ವರ್ಷ ವಿಸ್ತರಣೆಗೆ ನಿರ್ಣಯ

ರಾಮಕುಂಜ: ಗ್ರಾಮ ಪಂಚಾಯತ್ ವ್ಯಾಪ್ತಿಯ ಆತೂರು ಜಂಕ್ಷನ್‌ನಲ್ಲಿ ಇರುವ ಹಸಿ ಮೀನು ಮಾರುಕಟ್ಟೆ ಮಳಿಗೆಯಲ್ಲಿ ಹಸಿಮೀನು ಮಾರಾಟದ ಹಕ್ಕನ್ನು ಆಕ್ಷೇಪಣೆ ಬರದೇ ಇದ್ದಲ್ಲಿ ಇಸುಬು ಯು.ಕೆ.ಅವರಿಗೆ ಇನ್ನೊಂದು ವರ್ಷದ ಅವಧಿಗೆ ವಿಸ್ತರಿಸಲು ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಆತೂರು ಜಂಕ್ಷನ್‌ನಲ್ಲಿ ಇರುವ ಗ್ರಾಮ ಪಂಚಾಯತ್‌ನ ಹಸಿಮೀನು ಮಾರುಕಟ್ಟೆಯಲ್ಲಿ ಹಸಿ ಮೀನು ಮಾರಾಟದ ಹಕ್ಕನ್ನು 2024-25ನೇ ಸಾಲಿನಲ್ಲಿ ಇಸುಬು ಯು.ಕೆ.ಎಂಬವರು ರೂ.2,01,800ಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಏಲಂ ಹಕ್ಕಿನ ಅವಧಿಯು ಮಾ.31,2025ಕ್ಕೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ 1 ವರ್ಷ ಮಾರಾಟದ ಹಕ್ಕು ವಿಸ್ತರಿಸುವಂತೆ ಇಸುಬು ಯು.ಕೆ.ಅವರು ಗ್ರಾಮ ಪಂಚಾಯತ್‌ಗೆ ಮಾಡಿರುವ ಮನವಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಏಲಂ ಹಕ್ಕು ವಿಸ್ತರಣೆಗೆ ಯಾವುದೇ ಆಕ್ಷೇಪಣೆ ಬರದೇ ಇದ್ದಲ್ಲಿ ಮಾತ್ರ 1 ವರ್ಷಗಳ ಅವಧಿಗೆ ಇಸುಬು ಯು.ಕೆ.ಅವರಿಗೆ ಹಸಿ ಮೀನು ಮಾರಾಟದ ಹಕ್ಕು ವಿಸ್ತರಿಸುವಂತೆ ಸದಸ್ಯರು ಅಭಿಪ್ರಾಯ ತಿಳಿಸಿದರು. ಈ ಹಿನ್ನೆಲೆಯಲ್ಲಿ ಎಪ್ರಿಲ್ 5ರೊಳಗೆ ಗ್ರಾಮಸ್ಥರಿಂದ ಯಾವುದೇ ಆಕ್ಷೇಪಣೆಗಳು ಬರದೇ ಇದ್ದಲ್ಲಿ ಇಸುಬು ಯು.ಕೆ.ಯವರಿಗೆ ಹಸಿ ಮೀನು ಮಾರಾಟದ ಹಕ್ಕನ್ನು 1 ವರ್ಷದ ಅವಧಿಗೆ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಟವರ್‌ಗಳ ಶುಲ್ಕ ಬಾಕಿ ಪಾವತಿಗೆ ನೋಟೀಸ್ ನೀಡಲು ನಿರ್ಣಯ:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್, ಏರ್‌ಟೆಲ್ ಮತ್ತು ಜಿ.ಟಿ.ಎಲ್ ಟವರ್‌ಗಳು ಸರಕಾರದ ಆದೇಶದಂತೆ ಪ್ರತಿ ವರ್ಷ ಗ್ರಾಮ ಪಂಚಾಯತ್‌ಗೆ ೧೨ ಸಾವಿರ ರೂ.ಶುಲ್ಕ ಪಾವತಿಸಬೇಕು. ಇಂಡಸ್ ಕಂಪೆನಿ ಬೆಂಗಳೂರು ಮತ್ತು ಟವರ್ ಕಟ್ಟಲು ಜಾಗ ನೀಡಿದವರಿಗೆ ನೋಟಿಸ್ ನೀಡಿ ಬಾಕಿ ಮೊತ್ತ ಪಾವತಿಸುವಂತೆ ಕೇಳಿಕೊಳ್ಳುವುದು. ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ಲಾಸ್ಟಿಕ್ ಚಯರ್ ಖರೀದಿಗೆ ನಿರ್ಣಯ:
ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮಸಭೆ ಮತ್ತು ವಿವಿಧ ಸಭೆಗಳನ್ನು ನಡೆಸಲು ಚಯರ್‌ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 70 ಪ್ಲಾಸ್ಟಿಕ್ ಚಯರ್‌ಗಳ ಖರೀದಿಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಉಪಾಧ್ಯಕ್ಷ ಕೇಶವ ಕೆ., ಸದಸ್ಯರಾದ ಪ್ರಶಾಂತ್ ಆರ್.ಕೆ., ಜಯಶ್ರೀ, ಪ್ರದೀಪ್ ಬಿ., ಭಾರತಿ ಎಂ., ಭವಾನಿ, ಯತೀಶ್‌ಕುಮಾರ್, ಸುಜಾತ, ಕುಶಾಲಪ್ಪ ಬಿ., ವಸಂತ ಪಿ., ಅಬ್ದುಲ್ ರಹಿಮಾನ್ ಹೆಚ್., ರೋಹಿಣಿ, ಆಯಷಾ ಶರೀಫ್., ಮಾಲತಿ ಎನ್.ಕೆ., ಸೂರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿ, ಲೆಕ್ಕಪತ್ರ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಲಲಿತಾ ಜಿ.ಡಿ.ವಂದಿಸಿದರು.

ತೆರಿಗೆ ಪಾವತಿ ಕಡ್ಡಾಯ:
2025-26ನೇ ಸಾಲಿನ ಮನೆ ತೆರಿಗೆ, ನೀರಿನ ತೆರಿಗೆ ಹಾಗೂ ಇನ್ನಿತರ ತೆರಿಗೆಗಳನ್ನು ಗ್ರಾಮಸ್ಥರು ಕಡ್ಡಾಯವಾಗಿ ಪಾವತಿಸಬೇಕು. ಗ್ರಾಮಸ್ಥರು ಕಚೇರಿಗೆ ಬಂದಲ್ಲಿ ಅವರಿಂದ ತೆರಿಗೆ ವಸೂಲಾತಿ ಮಾಡಿದ ನಂತರವೇ ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡುವುದು ಎಂಬ ವಿಚಾರವು ಸಭೆಯಲ್ಲಿ ಪ್ರಸ್ತಾಪಗೊಂಡಿತು. ಈ ಬಗ್ಗೆ ಚರ್ಚೆ ನಡೆದು ಗ್ರಾಮಸ್ಥರ ಬಾಕಿ ಮತ್ತು ಚಾಲ್ತಿಗಳ ಯಾವುದೇ ತೆರಿಗೆ ಇದ್ದಲ್ಲಿ ವಸೂಲಿ ಮಾಡಿ ಅವರ ಕೆಲಸಗಳನ್ನು ಮಾಡಿಕೊಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here