ಪತ್ರಕರ್ತನ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ – ಪ್ರತೀಕ್ ಕೋಟ್ಯಾನ್‌ನನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಮನವಿ

0

ಡಾ. ಯು.ಪಿ. ಶಿವಾನಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಪತ್ರಕರ್ತನ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ ಪ್ರತೀಕ್ ಕೋಟ್ಯಾನ್ ಎಂಬಾತ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿ ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರು ಆಗ್ರಹಿಸಿದ್ದಾರೆ. ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಸುದ್ದಿ ಬಿಡುಗಡೆ ಸಂಸ್ಥೆಯ ಬಗ್ಗೆ ಅಪಪ್ರಚಾರ:

ಕಳೆದ 40 ವರ್ಷಗಳಿಂದ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಸಂಸ್ಥೆಯ ಬಗ್ಗೆ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುದ್ದಿ ಬಿಡುಗಡೆ ಸಂಸ್ಥೆಯ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರ್ವಕವಾಗಿ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಮಾಡುತ್ತಿರುವ ಹೋರಾಟವನ್ನು ನಿಲ್ಲಿಸಲು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದ ಯು.ಪಿ.ಶಿವಾನಂದರು, ನಮ್ಮಲ್ಲಿ ಏನೂ ಭ್ರಷ್ಟಾಚಾರ ನಡೆದಿಲ್ಲ, ಬೇಕಿದ್ದರೆ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಶಾಸಕ ಹರೀಶ್ ಪೂಂಜ ಹಾಗೂ ಅಪಪ್ರಚಾರ ಮಾಡುತ್ತಿರುವ ಪ್ರತೀಕನ ಆಪ್ತ ಮೋಹನ್ ಕುಮಾರ್ ಅವರನ್ನು ಕರೆದು ಅವರ ಸಮ್ಮುಖದಲ್ಲಿ ವಿಚಾರಿಸಬಹುದು ಎಂದು ಪಂಥಾಹ್ವಾನ ನೀಡಿದರೂ, ಪ್ರತೀಕ್ ಎಂಬಾತ ಅಸಭ್ಯವಾಗಿ ನಿಂದಿಸಿ, ಜೀವ ಬೆದರಿಕೆವೊಡ್ಡಿದ್ದಾನೆ ಮತ್ತು ತನ್ನ ಅಪಪ್ರಚಾರ ಮುಂದುವರಿಸಿದ್ದಾನೆ. ಈ ಅಪಪ್ರಚಾರ ಪೂಂಜ ಫ್ಯಾನ್ಸ್ ಕ್ಲಬ್ ಮತ್ತು ಧರ್ಮಸೇನೆ ಎಂಬ ಫೇಸ್‌ಬುಕ್ ಖಾತೆಯಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅವನ ಈ ಅಪಪ್ರಚಾರದ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ತಿಳಿಸಿದರು.


ಈ ಪಿತೂರಿಯ ಹಿಂದೆ ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ಪ್ರತೀಕ್ ಕೋಟ್ಯಾನ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊಲೆ ಪ್ರಕರಣ, ಅಕ್ರಮ ಕಲ್ಲುಗಾರಿಕೆ, ಬೆದರಿಕೆ, ಬ್ಲಾಕ್ಮೇಲ್ ಪ್ರಕರಣ ಸಹಿತ ಹಲವು ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಯಾಗಿರುವ, ಕೊಲೆ ಕೇಸಿನಲ್ಲಿ ಆರೋಪಿಯಾಗಿರುವ ಮತ್ತು ರೌಡಿಶೀಟರ್ ಆಗಿರುವ ಪ್ರತೀಕ್ ಕೋಟ್ಯಾನ್ ಹಲವರನ್ನು ಬ್ಲಾಕ್ಮೇಲ್ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸ್ ಇಲಾಖೆ, ಪತ್ರಕರ್ತರು ಸಹಿತ ಪ್ರಭಾವಿಗಳೊಂದಿಗೆ ಸೇರಿಕೊಂಡು ತಾನೋರ್ವ ಪ್ರಭಾವಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಈತ ಹಲವು ಗಣ್ಯ ವ್ಯಕ್ತಿಗಳು ಬೆಳ್ತಂಗಡಿ ತಾಲೂಕಿಗೆ ಬಂದಾಗಲೂ ಅವರ ಜತೆ ಕಾಣಿಸಿಕೊಳ್ಳುತ್ತಿದ್ದಾನೆ. ಭದ್ರತಾ ದೃಷ್ಟಿಯಿಂದಲೂ ಈತ ಈ ರೀತಿ ಸಾರ್ವಜನಿಕವಾಗಿ ಗಣ್ಯರೊಂದಿಗೆ ಕಾಣಿಸಿಕೊಳ್ಳುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಪ್ರತೀಕ್ ಕೋಟ್ಯಾನ್‌ನನ್ನು ಬೆಳ್ತಂಗಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದರ ಜೊತೆಗೆ ದ.ಕ. ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದ ಡಾ. ಯು.ಪಿ. ಶಿವಾನಂದ ಅವರು ಪತ್ರಕರ್ತರ ಸೋಗಿನಲ್ಲಿ ಪ್ರತೀಕ್ ಕೋಟ್ಯಾನ್ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರ ಪತ್ರಕರ್ತರೊಂದಿಗೆ ಭಾಗವಹಿಸುವುದರಿಂದ ಪತ್ರಕರ್ತರು ಕೂಡ ರೌಡಿಶೀಟರ್ ಪ್ರತೀಕ್‌ನ ಕಾನೂನು ಬಾಹಿರ ಚಟುವಟಿಕೆಗಳಿಂದ ತೊಂದರೆಗೊಳಗಾಗಬಹುದು ಎಂಬ ಆತಂಕ ನಮ್ಮ ಪತ್ರಕರ್ತರಲ್ಲಿದೆ. ಆದುದರಿಂದ ರೌಡಿಶೀಟರ್, ಬ್ಲ್ಯಾಕ್‌ಮೇಲರ್ ಅಂತವರು ಪತ್ರಕರ್ತರ ಸೋಗಿನಲ್ಲಿ ಗುರುತಿಸಿಕೊಳ್ಳದಂತೆ ಪತ್ರಕರ್ತರು ಅಂತವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.


ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಡಿ.ಸಿ., ಎಸ್‌ಪಿಗೆ ಮನವಿ
ಪತ್ರಕರ್ತನ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ ಪ್ರತೀಕ್ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿ ಆತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ದ.ಕ. ಜಿಲ್ಲಾಧಿಕಾರಿಯವರ ಕಚೇರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಎಸ್‌ಪಿ ಯತೀಶ್ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪತ್ರಕರ್ತರ ಸಂಘಕ್ಕೆ ಮನವಿ
ಯಾವುದೇ ಪತ್ರಿಕೆ ಅಥವಾ ಟಿ.ವಿ. ಮಾಧ್ಯಮದಲ್ಲಿ ಇಲ್ಲದಿದ್ದರೂ ತಾನು ಪತ್ರಕರ್ತ ಎಂದು ಹೇಳಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ರೌಡಿಶೀಟರ್ ಪ್ರತೀಕ್ ಕೋಟ್ಯಾನ್ ಕುರಿತು ಮುನ್ನೆಚ್ಚರಿಕೆ ವಹಿಸಿ ರಕ್ಷಣೆ ನೀಡುವಂತೆ ಆಗ್ರಹಿಸಿ ಸುದ್ದಿ ಬಿಡುಗಡೆ ವರದಿಗಾರರು ಪತ್ರಕರ್ತರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾಗಿರುವ ಮಂಜುನಾಥ ರೈ ಮತ್ತು ಜಾರಪ್ಪ ಪೂಜಾರಿ ಅವರು ತಾವು ಸದಸ್ಯರಾಗಿರುವ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮನವಿ ಸಲ್ಲಿಸಿದ್ದು ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರೂ ಆಗಿರುವ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ತಾವು ಸದಸ್ಯರಾಗಿರುವ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ.

ಪ್ರತೀಕ್ ಕೋಟ್ಯಾನ್ ಪರಿಚಯ

ಲಾಯಿಲ ನಿವಾಸಿಯಾಗಿರುವ ಪ್ರತೀಕ್ ಕೋಟ್ಯಾನ್ ವೆಬ್‌ಸೈಟ್ ವರದಿಗಾರ ಎಂದು ಹೇಳಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದೆ. ಬಂಟ್ವಾಳದ ಭಂಡಾರಿಬೆಟ್ಟು ಎಂಬಲ್ಲಿ ನಡೆದ ಸುರೇಂದ್ರ ಭಂಡಾರಿ ಅವರ ಕೊಲೆಗೆ ಒಳಸಂಚು ರೂಪಿಸಿದ ಆರೋಪದಡಿ ಜೈಲು ಸೇರಿದ್ದ ಪ್ರತೀಕ್ ಕೋಟ್ಯಾನ್ ರೌಡಿಶೀಟರ್ ಆಗಿದ್ದಾನೆ. ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ತಹಶೀಲ್ದಾರ್ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಸೇರಿದ್ದ ಈತನ ವಿರುದ್ಧ ಕಸಬಾ ಗ್ರಾಮದ ಸಂತೆಕಟ್ಟೆ ಬಳಿಯ ಸುವರ್ಣ ಆರ್ಕೆಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಧ್ವನಿ ನ್ಯೂಸ್ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಕ್ಯಾಮರಾ, ಸಿ.ಸಿ.ಕ್ಯಾಮರಾ ಮತ್ತು ಹಣ ದೋಚಿ ಬೆದರಿಕೆ ಒಡ್ಡಿದ ಆರೋಪದಡಿ ಕೇಸು ದಾಖಲಾಗಿದೆ. ಮಾಜಿ ಶಾಸಕ ವಸಂತ ಬಂಗೇರ ಅವರ ಕುಟುಂಬದ ಕುರಿತು ಮಹಾ ಎಕ್ಸ್ ಪ್ರೆಸ್ ವೆಬ್ ಮಾಧ್ಯಮದಲ್ಲಿ ವರದಿ ಪ್ರಸಾರ ಮಾಡಿದ್ದಲ್ಲದೆ ವಸಂತ ಬಂಗೇರ ಅವರ ಪುತ್ರಿ ಬಿನುತಾ ಬಂಗೇರ ಮತ್ತು ಅವರ ಮನೆಯವರ ಖಾಸಗಿ ಮಾಹಿತಿಗಳನ್ನು ಭಾವಚಿತ್ರಗಳನ್ನು ಶೇರ್ ಮಾಡಿ ವೆಬ್ ಮಾಧ್ಯಮದಲ್ಲಿ ಕಪೋಲ ಕಲ್ಪಿತ ವರದಿ ಪ್ರಕಟಿಸಿ ಬೆದರಿಕೆ ಒಡ್ಡುವ ರೀತಿಯಲ್ಲಿ ಬಿನುತಾ ಬಂಗೇರ ಅವರ ಕಾರಿನ ಚಾಲಕನಿಗೆ ಫೋಟೋ ಕಳುಹಿಸಿ ಬಿನುತಾ ಬಂಗೇರ ಅವರ ಬಗ್ಗೆ ಕೀಳಾಗಿ ಕೆಟ್ಟ ಅಭಿಪ್ರಾಯ ಬರುವಂತೆ ಮೆಸೆಜ್ ಹಾಕಿರುವ ಬಗ್ಗೆಯೂ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರೀತಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಪ್ರತೀಕ್ ಅಪಪ್ರಚಾರ ನಡೆಸುತ್ತಿರುವವರಲ್ಲಿ ಪ್ರಮುಖನಾಗಿದ್ದಾನೆ.

ಪ್ರತೀಕ್ ಕೋಟ್ಯಾನ್

LEAVE A REPLY

Please enter your comment!
Please enter your name here