ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ’ಬೇಸಿಗೆ ಶಿಬಿರ – 2025’ ಕೌಶಲ್ಯ ಪರ್ವ ಮಾ.31ರಂದು ಉದ್ಘಾಟನೆಗೊಂಡಿತು.
ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಹೇಮಲತಾ ಪ್ರದೀಪ್ ಶಿಬಿರ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ಒಂದು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಬಾಲಚಂದ್ರ ಮುಚ್ಚಿಂತಾಯರವರು ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಉತ್ತಮ ಸೃಜನಶೀಲತೆಯಿಂದ ಜೀವನದ ಕನಸುಗಳನ್ನು ಸಾಕಾರಗೊಳಿಸಬೇಕೆಂದು ಹೇಳಿದರು. ರಾಮಕುಂಜ ಕ್ಲಸ್ಟರ್ ಸಿ.ಆರ್.ಪಿ ಮಹೇಶ್ ಎಂ. ಸಂದರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ಅಧಿಕಾರಿ ಆನಂದ ಎಸ್.ಟಿ., ಶಿಕ್ಷಕ ರಕ್ಷಕ ಸಂಘದ ಸದಸ್ಯ ಮನೋಹರ ಜೈನ್ ಅರಂತಬೈಲು, ವಿದ್ಯಾರ್ಥಿ ಪೋಷಕರಾದ ಜಯಶ್ರೀ ವಳಕಡಮ, ರವಿಕುಮಾರ್ ಹೊಸಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್ ಸ್ವಾಗತಿಸಿದರು. ಸಹ ಶಿಕ್ಷಕಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತ ವಂದಿಸಿದರು. ಸಂಸ್ಥೆಯ ವ್ಯವಸ್ಥಾಪಕರು, ಶಿಕ್ಷಕ- ಶಿಕ್ಷಕೇತರರು ಸಹಕರಿಸಿದರು.

1 ವಾರ ನಡೆಯುವ ಬೇಸಿಗೆ ಶಿಬಿರದಲ್ಲಿ ವಿಜ್ಞಾನ ಮತ್ತು ಗಣಿತ ಮಾದರಿ ತಯಾರಿಕೆ, ಕುಣಿತ ಭಜನೆ, ಸಮಾಜ ವಿಜ್ಞಾನ ಹಾಗೂ ಭಾಷಾವಾರು ವಿಷಯಗಳ ಮಾದರಿ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಚಿತ್ರಕಲೆ, ಪ್ರಥಮ ಚಿಕಿತ್ಸೆ ಮಾಹಿತಿ, ಯೋಗ ತರಬೇತಿ, ಪೌಷ್ಟಿಕ ಆಹಾರ ಪಾನೀಯಗಳ ತಯಾರಿಕೆಗಳ ಮಾಹಿತಿ, ಜಾನಪದ ಕ್ರೀಡೆಗಳು, ಮುಖವರ್ಣಿಕೆ ಹಾಗೂ ಮುಖವಾಡಗಳ ತಯಾರಿಕೆ, ಕಿರು ಪ್ರವಾಸ, ಅಭಿನಯ ಗೀತೆ ತರಬೇತಿಯನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ.