ಪರ್ಲಡ್ಕ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ

0

ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಪರ್ಲಡ್ಕ ಇಲ್ಲಿ ಮಾ.1ರಂದು ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ನಡೆಯಿತು.

ಪುತ್ತೂರು ನಗರ ಠಾಣೆಯ ಪಿಎಸ್ಐ ಆಂಜನೇಯ ರೆಡ್ಡಿ ದೀಪ ಬೆಳಗಿಸುವ ಮೂಲಕ ಶಿಬಿರದ ಉದ್ಘಾಟನೆಯನ್ನು ಮಾಡಿ ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳೇ ಮುಂದೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಹಾಗೂ ಗೌರವವನ್ನು ಖಂಡಿತ ಪಡೆಯುತ್ತಾರೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಜೀವನ ಕೌಶಲ್ಯದೊಂದಿಗೆ ಉತ್ತಮ ಜ್ಞಾನವನ್ನು ಪಡೆದುಕೊಳ್ಳುವ ಎಲ್ಲಾ ಅವಕಾಶಗಳು ಮಕ್ಕಳಿಗೆ ಸಿಗುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ನಿಂದ ಆದಷ್ಟು ದೂರವಿದ್ದು, ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಅರಿತುಕೊಂಡು ಸಾಧನೆಯನ್ನು ಮಾಡುವ ಛಲ ಬೆಳೆಸಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ಪರ್ಲಡ್ಕ ಇವರು ಮಾತನಾಡುತ್ತಾ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ಆಸಕ್ತಿ ವಹಿಸಿಕೊಂಡಾಗ ಮಾತ್ರ ನೆನಪು ಶಕ್ತಿ ಹೆಚ್ಚುತ್ತದೆ ಹಾಗೂ ಪರಿಣಾಮಕಾರಿಯಾಗಿ ಕಲಿಕೆ ಸಾಧ್ಯ ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಪುತ್ತೂರು ಪುರಸಭೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಇವರು ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದ ಯಶಸ್ಸಿಗ ಶುಭ ಹಾರೈಸಿದರು. ಮುಖ್ಯ ಗುರುಗಳಾದ ವತ್ಸಲಾ.ಬಿ ಸ್ವಾಗತಿಸಿ, ಐದನೇ ತರಗತಿ ವಿದ್ಯಾರ್ಥಿ ಅಭಯ್ ಪ್ರಾರ್ಥಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸುಮಂಗಲಾ ಧನ್ಯವಾದ ಸಮರ್ಪಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರೇಮ ಎಂ ಹಾಗೂ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಇಂದಿನ ಶಿಬಿರದಲ್ಲಿ ಹವ್ಯಾಸಿ ಚಿತ್ರ ಕಲಾವಿದರಾದ ನಿವೃತ್ತ ಅಡ್ವೊಕೇಟ್ ಎಸ್ ಎನ್ ಭಟ್ ಇವರು ಮಕ್ಕಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿದರು ಹಾಗೂ ಸುಮಂಗಲಾ ಇವರು ವಿವಿಧ ಸನ್ನಿವೇಶಗಳನ್ನು ಓದಿಸಿದ ಬಳಿಕ ಆಶು ನಟನೆಯ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿದರು.

 ಈ ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮೂರು ದಿನಗಳಲ್ಲಿ ಮಕ್ಕಳಿಗೆ ವಿವಿಧ ಸಂತಸದಾಯಕ ಚಟುವಟಿಕೆಗಳನ್ನು ನಡೆಸಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here