ಅನಿವಾರ್ಯವಾದರೆ ಕಾನೂನು ಹೋರಾಟ-ಶರಣ್ ಪಂಪ್ವೆಲ್
ಪುತ್ತೂರು:ರಾಜ್ಯ ಸರ್ಕಾರ ಜಾರಿಗೆ ತಂದಿರುವ,ಸಿವಿಲ್ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಪುತ್ತೂರು ದರ್ಬೆಯಲ್ಲಿ ಏ.8ರಂದು ಪ್ರತಿಭಟನೆ ನಡೆಯಿತು.
ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಜಾತಿ ಆಧಾರಿತವಾಗಿ ಮೀಸಲಾತಿ ಒದಗಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾಗಿರುವ ಸಂವಿಧಾನಕ್ಕೆ ವಿರುದ್ಧವಾಗಿದೆ.ಕೇವಲ ಓಲೈಕೆ ರಾಜಕಾರಣ, ಮತಬ್ಯಾಂಕ್ ರಾಜಕೀಯವಾಗಿದೆ.ಇವತ್ತು ರಾಜ್ಯ ಸರಕಾರದ ಈ ತೀರ್ಮಾನದಿಂದ ಹಿಂದುಳಿದ, ದಲಿತ, ಹಿಂದು ಗುತ್ತಿಗೆದಾರಿಗೆ ತೊಂದರೆ ಆಗಿದೆ.ಇಡೀ ರಾಜ್ಯದ ಜನತೆ ಈ ಮಸೂದೆಯನ್ನು ವಿರೋಧ ಮಾಡುತ್ತಿದ್ದಾರೆ.ಮಸೂದೆಯನ್ನು ರಾಜ್ಯ ಸರಕಾರ ವಾಪಸ್ ಪಡೆಯದಿದ್ದರೆ ಪ್ರತಿ ಊರು, ಗ್ರಾಮಗ್ರಾಮಗಳಲ್ಲಿ ಪ್ರತಿಭಟನೆ ಮುಂದುವರಿಯಲಿದೆ.ಅನಿವಾರ್ಯವಾದರೆ ಈ ವಿಧೇಯಕದ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರ ಭಯವಿಲ್ಲ: ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ಬಿಸಾಡುವ ಕೃತ್ಯ, ಮೈಸೂರಿನಲ್ಲಿ ಎಸಿಪಿಯವರ ವಾಹನಕ್ಕೆ ಹಾನಿ ಮಾಡಿರುವುದು, ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಯನ್ನು ಪೊಲೀಸ್ ಕಾವಲಿನಲ್ಲಿ ಕೋರ್ಟ್‌ಗೆ ತರುವಾಗ ಒಬ್ಬ ಯುವಕ ಆತನ ಹಣೆಗೆ ಮುತ್ತು ಕೊಡುತ್ತಾನೆ ಎಂದಾದರೆ ಇದು ಪೊಲೀಸರ ಭಯವೇ ಇಲ್ಲ ಎಂಬಂತಾಗಿದೆ ಎಂದು ಶರಣ್ ಪಂಪ್‌ವೆಲ್ ಹೇಳಿದರು.
ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ,ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ಭರತ್ ಕುಮ್ಡೇಲ್,ದಾಮೋದರ್ ಪಾಟಾಳಿ, ಶ್ರೀಧರ್ ತೆಂಕಿಲ, ಪ್ರವೀಣ್ ಕಲ್ಲೇಗ, ಸಂಜಯ್,ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮರ್ ಕಲ್ಲಿಮಾರ್, ರವಿ ಕೈತ್ತಡ್ಕ, ಸೀತಾರಾಮ ಭಟ್, ಸತೀಶ್ ಬಿ.ಎಸ್,ಶಿವರಾಮ, ಹರೀಶ್ ದೋಳ್ಪಾಡಿ, ಜಯಲಕ್ಷ್ಮೀ ಶಗ್ರಿತ್ತಾಯ, ವಿಶಾಖ್ ರೈ ಮತ್ತಿತರರು ಉಪಸ್ಥಿತರಿದ್ದರು.