ಪುತ್ತೂರು:ಐದು ವರ್ಷಗಳ ಹಿಂದೆ ರಾಮಕುಂಜ ಗ್ರಾಮದ ಖಂಡಿಗದಲ್ಲಿ ದಂಪತಿ ಕೃಷಿ ತೋಟದಲ್ಲಿ ಕಾರ್ಯನಿರತರಾಗಿದ್ದ ವೇಳೆ ಅಕ್ರಮ ಪ್ರವೇಶಿಸಿ ಹಲ್ಲೆ ನಡೆಸಿ,ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2020ರ ಅ.30ರಂದು ಖಂಡಿಗದಲ್ಲಿ ಶ್ರೀಮತಿ ರಜನಿ ಎಂಬವರು ಪತಿ ಜನಾರ್ದನ ಗೌಡ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಪತಿ,ಇತರರ ಜೊತೆ ತೋಟದ ಕೆಲಸ ಮಾಡಿಕೊಂಡಿದ್ದ ಸಮಯ ಅಕ್ರಮ ಪ್ರವೇಶ ಮಾಡಿದ ಸುಕೇಶ್ ಎಂಬಾತ, ರಜನಿಜನಾರ್ದನ ಗೌಡ ದಂಪತಿಯನ್ನುದ್ದೇಶಿಸಿ ಅವಾಚ್ಯವಾಗಿ ಬೈದು, ಜನಾರ್ದನ ಗೌಡರ ಮೇಲೆ ಹಲ್ಲೆಗೆ ಮುಂದಾಗಿದ್ದು, ತಡೆಯಲು ಬಂದ ರಜನಿ ಅವರ ತಲೆಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿತ್ತು.
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರಿನ ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿಯವರು ಆರೋಪಿಯನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆ.ಆರೋಪಿ ಪರ ವಕೀಲರಾದ ಶ್ರೀಹರಿ,ಪ್ರಸಾದ್ ಕುಮಾರ್, ಪ್ರವೀಣ್ ಬಂಬಿಲ,ಉಲ್ಲಾಸ್ ವಾದಿಸಿದ್ದರು.