ನಳಿನ್ ಕುಮಾರ್ ಕಟೀಲ್‌ಗೆ ರೂ.12 ಕೋಟಿ ಮೌಲ್ಯದ ಜಿ-ಕೆಟಗರಿ ನಿವೇಶನ:ಇಂದು ಸಂಪುಟ ಸಭೆಯಲ್ಲಿ ಮಂಡನೆ?

0

ಬೆಂಗಳೂರು:ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ದ.ಕ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಂಗಳೂರು ಎಚ್‌ಎಸ್‌ಆರ್ ಬಡಾವಣೆಯಲ್ಲಿ ಜಿ-ಕೆಟಗರಿ ಕೋಟಾದಲ್ಲಿ 5080 ಅಡಿ ಅಳತೆಯ, ಅಂದಾಜು ರೂ.12 ಕೋಟಿ ಮೌಲ್ಯದ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಏ.11ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದನೆಯ ಮೇರೆಗೆ ಈ ಟಿಪ್ಪಣಿಯನ್ನು ಸಚಿವ ಸಂಪುಟ ಸಭೆಗೆ ಮಂಡಿಸಲು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


ಬಿಡಿಎದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿ-ಕೆಟಗರಿಯಡಿ ಬನಶಂಕರಿ ಆರನೆ ಹಂತ ಏಳನೇ ಬಡಾವಣೆಯಲ್ಲಿ 15*24 ಮೀಟರ್ ಅಳತೆಯ ನಿವೇಶನ(ಸಂಖ್ಯೆ 204)ಹಂಚಿಕೆ ಮಾಡಿ 2009ರ ನವೆಂಬರ್ 2ರಂದು ಹಂಚಿಕೆ ಪತ್ರ ನೀಡಲಾಗಿತ್ತು.ನಂತರ ನಳಿನ್ ಅವರ ಮನವಿಯ ಮೇರೆಗೆ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್ 3ರಲ್ಲಿ ನಿವೇಶನ(ಸಂಖ್ಯೆ 13/ಬಿ1)ಹಂಚಿಕೆ ಮಾಡಿ 2011ರ ಜೂನ್‌ನಲ್ಲಿ ಹಂಚಿಕೆ ಪತ್ರ ನೀಡಲಾಗಿತ್ತು.ಹೆಚ್ಚುವರಿ ವಿಸ್ತೀರ್ಣದ ಮೌಲ್ಯ ಹಾಗೂ ಬಡ್ಡಿಯನ್ನು ಈಗಾಗಲೇ ಪಾವತಿಸಿರುವ ನಳಿನ್ ಕುಮಾರ್ ಕಟೀಲ್ ಅವರು ನಿವೇಶನವನ್ನು ನೋಂದಾಯಿಸಿಕೊಡುವಂತೆ ಮನವಿ ಮಾಡಿದ್ದರು.ಆದರೆ, ಜಿ-ಕೆಟಗರಿಯ ನಿವೇಶನ ಹಂಚಿಕೆ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಾಧಿಕಾರವು ನಿವೇಶನದ ನೋಂದಣಿ ಮಾಡಿಕೊಟ್ಟಿರಲಿಲ್ಲ.ಬಳಿಕ, ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ವಿಚಾರಣಾ ಸಮಿತಿಯ ಆದೇಶದ ಪ್ರಕಾರ, ಪ್ರಾಧಿಕಾರವು ಗುತ್ತಿಗೆ ಹಾಗೂ ಮಾರಾಟ ಪತ್ರವನ್ನು ನೋಂದಾಯಿಸಿ 2020ರಲ್ಲಿ ಸ್ವಾಧಿನಪತ್ರ ನೀಡಿತ್ತು.


ನಳಿನ್ ಮನವಿ:
ತಾನು ಪೂರ್ಣ ಮೌಲ್ಯ ಪಾವತಿಸಿದ್ದರೂ ನಿವೇಶನವನ್ನು ತಡವಾಗಿ ನೋಂದಣಿ ಮಾಡಲಾಗಿದೆ.ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವೇಶನದ ಗುತ್ತಿಗೆ ಅವಧಿ ಸಡಿಲಿಸಿ ಶುದ್ಧ ಕ್ರಯಪತ್ರ ಮಾಡಿಕೊಡಬೇಕು ಎಂದು ನಳಿನ್ ಕುಮಾರ್ ಅವರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.ಈ ಪ್ರಸ್ತಾವನೆ ತಿರಸ್ಕರಿಸಬಹುದು ಅಥವಾ ಶುದ್ಧ ಕ್ರಯಪತ್ರ ನೋಂದಾಯಿಸಲು ಅನುಮತಿ ನೀಡಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here