ಉಪ್ಪಿನಂಗಡಿ: ಎಟಿಎಂಗೆ ಹಾನಿ, ಡಯಲರ್ ಕಳ್ಳತನ ಆರೋಪ -ಆರೋಪಿಗೆ ಜಾಮೀನು

0

ಉಪ್ಪಿನಂಗಡಿ: ಇಲ್ಲಿನ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿ ಎಟಿಎಂ ಯಂತ್ರಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿ ಮಹಮ್ಮದ್ ರಫೀಕ್ (35ವ) ಎಂಬಾತನನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.


ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ ಅಲ್ಲಿನ ಸಿಸಿ ಕ್ಯಾಮರಾವನ್ನು ಕಿತ್ತೆಗೆಯಲು ಯತ್ನಿಸಿ , ಎಟಿಎಂ ಮಿಷಿನ್ ನನ್ನು ತೆರೆಯಲು ಯತ್ನಿಸಿ ಎಟಿಎಂ ಮಿಷಿನ್ ಗೆ ಹಾನಿಯನ್ನುಂಟು ಮಾಡಿದ್ದಲ್ಲದೆ, ಅದರ ಡಯಲರ್ ಕದ್ದೊಯ್ದಿದ್ದ. ಈ ಬಗ್ಗೆ ಪ್ರಶಾಂತ್ ಡಿಕೋಸ್ಟಾ ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದಾಗ ಪರಿಸರದ ಸಿಸಿ ಕ್ಯಾಮಾರದ ದೃಶ್ಯಾವಳಿಯಲ್ಲಿ ಶಂಕಿತ ಆರೋಪಿಯ ಸುಳಿವು ಪಡೆದುಕೊಂಡು ಮೂಲತಃ ಕಾಜೂರಿನ ನಿವಾಸಿಯಾಗಿರುವ, ಕುಪ್ಪೆಟ್ಟಿಯಲ್ಲಿ ಪತ್ನಿಯ ಮನೆಯನ್ನು ಹೊಂದಿದ್ದ ಮಹಮ್ಮದ್ ರಫೀಕ್ ನನ್ನು ಆತನ ಅತ್ತೆ ಮನೆಯಲ್ಲಿಯೇ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಬಂಧಿತನನ್ನು ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆರೋಪಿಗಿರುವ ಸವಲತ್ತು ಸಂತ್ರಸ್ತರಿಗಿಲ್ಲ:
ಆರೋಪಿಯ ಈ ಕೃತ್ಯದಿಂದಾಗಿ ಎಟಿಎಂ ಕೇಂದ್ರದ ಹಣ ಸ್ವೀಕಾರ ಯಂತ್ರವು ಹಾನಿಗೀಡಾಗಿದ್ದು, ಸುಮರು 2 ಲಕ್ಷದಷ್ಟು ನಷ್ಟ ಸಂಭವಿಸಿತ್ತು. ಅದರ ನಿರ್ವಹಣೆ ಮಾಡುವ ಪ್ರಶಾಂತ ಡಿಕೋಸ್ಟ ರವರು ಪೊಲೀಸ್‌ರಿಗೆ ದೂರು ನೀಡಿ ಮಹಜರು ಮಾಡಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಸತತ 2 ದಿನ ನ್ಯಾಯಾಲಯಕ್ಕೆ ಅಲೆದಾಡಿದ್ದರು. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಪ್ರಕರಣ ದಾಖಲಿಸಲಾದಾಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಆರೋಪಿಯನ್ನು ಪತ್ತೆ ಹಚ್ಚಿದ ಬಳಿಕ ಆರೋಪಿಯ ಸಮಕ್ಷಮ ನಡೆಯುವ ಮಹಜರು ಪ್ರಕ್ರಿಯೆ , ಮಹಜರಿಗೆ ಸಾಕ್ಷಿದಾರರನ್ನು ಗೊತ್ತು ಪಡಿಸುವ ಕಾರ್ಯ, ಎಲ್ಲವೂ ನಡೆದಾಗ ದೂರುದಾರ ಪ್ರಶಾಂತ್ ಡಿಕೋಸ್ಟಾ ಹೈರಾಣಾಗಿದ್ದರು. ಕೃತ್ಯ ನಡೆದ ಸ್ಥಳ , ಪೊಲೀಸ್ ಠಾಣೆ , ನ್ಯಾಯಾಲಯ ಎಂಬಂತೆಲ್ಲಾ ಬಾಡಿಗೆ ನೆಲೆಯಲ್ಲಿ ವಾಹನವನ್ನು ಗೊತ್ತು ಪಡಿಸಿ ಅಲೆದಾಡಿ, ಕೊನೆಗೂ ಪೊಲೀಸರ ಶ್ರಮದಿಂದ ಆರೋಪಿಯ ಬಂಧನವಾಯಿತ್ತೆಂದು ಸಮಾಧಾನದ ನಿಟ್ಟುಸಿರು ಬಿಟ್ಟಾಗಲೇ ಬಂಧಿತ ಆರೋಪಿಯನ್ನು ಜಾಮೀನಿನ ಮೇಲೆ ಪೊಲೀಸ್ ಠಾಣೆಯಲ್ಲೇ ಬಿಡುಗಡೆಗೊಳಿಸಲಾಯಿತ್ತೆಂಬ ಸುದ್ದಿ ಕೇಳಿ ಬಂದಿತ್ತು. ಆರೋಪಿಯ ಈ ಕೃತ್ಯದಿಂದಾಗಿ ಎಟಿಎಂ ಕೇಂದ್ರ ಹಾನಿಗೀಡಾಗಿ ಸಂಭವಿಸಿದ ಆರ್ಥಿಕ ಹಾನಿ ಒಂದೆಡೆ , ಎರಡು ದಿನಗಳಿಂದ ಅಲೆದಾಡಿದ ದೈಹಿಕ ಶ್ರಮ , ಉಂಟಾದ ಆರ್ಥಿಕ ನಷ್ಟದ ನೋವು ಇನ್ನೊಂದೆಡೆ . ಇದಕ್ಕಾಗಿ ಪಟ್ಟ ಶ್ರಮದ ಬೆವರು ಒಣಗುವ ಮುನ್ನವೇ ಬಂಧಿತ ಆರೋಪಿಯು ಪೊಲೀಸ್ ಠಾಣೆಗೆ ಪಿಕ್ನಿಕ್ ಹೋಗಿ ಬಂದಂತೆ ಬಿಡುಗಡೆಗೊಂಡದ್ದು ಪ್ರಶಾಂತ್ ಡಿಕೋಸ್ಟಾರವರನ್ನು ಭ್ರಮಾನಿರಸನಕ್ಕೆ ಒಳಪಡಿಸಿತ್ತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಡೀ ಎಟಿಎಂ ಕೇಂದ್ರವನ್ನೇ ಕದ್ದೊಯ್ದರೂ ನಾನೆಂದೂ ಪೊಲೀಸ್ ಇಲಾಖೆಗೆ ದೂರು ನೀಡಲಾರೆ ಎಂದು ಎಟಿಎಂ ಕಂಪೆನಿಯ ಅಧಿಕಾರಿಗಳಿಗೆ ತಿಳಿಸುವ ಮಟ್ಟಿಗೆ ವ್ಯವಸ್ಥೆಯ ಬಗ್ಗೆ ರೋಷ ವ್ಯಕ್ತಪಡಿಸಿದ್ದಾರೆ. ನಮ್ಮ ಕಾನೂನು ವ್ಯವಸ್ಥೆ ಆರೋಪಿಯ ಹಿತ ರಕ್ಷಿಸುವಲ್ಲಿ ತೋರುವ ಆಸಕ್ತಿಯನ್ನು ಸಂತ್ರಸ್ತರ ಹಿತ ಕಾಯುವಲ್ಲಿ ತೋರುತ್ತಿಲ್ಲ ಎನ್ನುವುದು ಈ ಪ್ರಕರಣದಲ್ಲಿ ಗೋಚರಿಸಿದಂತಾಗಿದೆ.

LEAVE A REPLY

Please enter your comment!
Please enter your name here