ಕಡಬ: ಹಿಂದೆ ಬಹಳಷ್ಟು ಶೋಷಣೆ ನಡೆಯುತ್ತಿತ್ತು. ಇದಕ್ಕೆ ದೊಡ್ಡ ಪರಿವರ್ತನೆಯ ಆಯಾಮ ತೋರಿಸಿದ್ದು ಭಜನೆ. ಭಜನೆಯಿಂದ ಸಾಮಾಜಿಕ ಪರಿವರ್ತನೆಯಾಗಿದೆ. ಭಜನೆಯಲ್ಲಿ ಎಲ್ಲರೂ ಸಮಾನರೇ, ಭಗವಂತನ ಗುಣಗಾನ ಮಾಡಲು, ತನ್ಮಯತೆ ಹೊಂದಲು, ಭಗವಂತನಲ್ಲಿ ನಮ್ಮ ಮನಸ್ಸು, ಭಾವ, ಕರ್ಮಶುದ್ಧಿಗೆ ಭಜನೆ ಮುಖ್ಯ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಎ.18ರಂದು ರಾತ್ರಿ ಕುಂತೂರುಪದವು-ರಾಮಡ್ಕದಲ್ಲಿ ನವೀಕೃತಗೊಂಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಲೋಕಾರ್ಪಣೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇವಸ್ಥಾನ, ಮಠ, ಭಜನಾ ಮಂದಿರಗಳು ಬದುಕಿನ ದೊಡ್ಡ ಶಕ್ತಿಕೇಂದ್ರ. ದೇವಸ್ಥಾನ, ಭಜನಾ ಮಂದಿರಕ್ಕೆ ಬಂದಾಗ ಮನಸ್ಸು ಭಗವಂತನಲ್ಲಿ ತಲ್ಲೀನವಾಗಿರಬೇಕು. ಇನ್ನೊಬ್ಬರಿಗೆ ಕೆಟ್ಟದನ್ನು ಬಯಸುವುದಕ್ಕೆ ಭಜನಾ ಮಂದಿರ, ದೇವಾಲಯಗಳು ಇರುವುದಲ್ಲ. ಇಂತಹ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಹೇಳಿಕೆಗಳು ಬರಕೂಡದು ಎಂದು ಹೇಳಿದ ಸ್ವಾಮೀಜಿ, ದೇವಸ್ಥಾನ, ಭಜನಾ ಮಂದಿರಗಳು ಧರ್ಮಶಿಕ್ಷಣ, ಸಂಸ್ಕಾರ ನೀಡುವ ಕೇಂದ್ರಗಳಾಗಿ ಬೆಳಗಬೇಕು. ಸಂಸ್ಕೃತಿಯನ್ನು ಮರೆಯಬಾರದು ಎಂದರು.

ಅತಿಥಿಯಾಗಿದ್ದ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ರಾಮ್ ಚರಣ್ ರೈ ಮಾಣಿಗ ಮಾತನಾಡಿ, ಭಜನಾಪಟುಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಭಜನೆಯಲ್ಲಿ ತಾವೂ ಪಾಲ್ಗೊಳ್ಳಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಡಬ ವಲಯ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಮಾತನಾಡಿ, ನಂಬಿಕೆ, ವಿಶ್ವಾಸ ಇರುವಲ್ಲಿ ದೇವರ ಸಾಕ್ಷಾತ್ಕಾರವಾಗುತ್ತದೆ. ಭಜನಾ ಪರಿಷತ್ ಮೂಲಕ ಜನರ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ನಿರಂತರ ಭಜನೆ ಮೂಲಕ ಸಂಸ್ಕಾರ, ಸಂಸ್ಕೃತಿ ಉಳಿಯಲಿದೆ ಎಂದರು.

ಪುತ್ತೂರು ಜಿಲ್ಲೆ ದೇವಾಲಯ ಸಂವರ್ಧನಾ ಸಮಿತಿ ಸದಸ್ಯ ಯಧುಶ್ರೀ ಆನೆಗುಂಡಿ ಮಾತನಾಡಿ, ಭಜನಾ ಮಂದಿರಗಳಲ್ಲಿ ಸಾಮರಸ್ಯ ಬಂದಾಗ ಧರ್ಮ ಉಳಿಯಲಿದೆ. ಭಜನೆಯಿಂದ ಸಾಮರಸ್ಯ ಕಾಣಲು ಸಾಧ್ಯವಿದೆ. ಭಜನೆಯಿಂದ ಆರೋಗ್ಯಪೂರ್ಣ ಬದುಕು ಸಾಧ್ಯವಾಗಲಿದೆ ಎಂದರು. ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ ವಿ., ಮಾತನಾಡಿ, ಶಾಲೆಯ ಪಕ್ಕದಲ್ಲೇ ಸಂಸ್ಕಾರ, ಜ್ಞಾನಕೇಂದ್ರವಾಗಿ ಭಜನಾ ಮಂದಿರ ನಿರ್ಮಾಣಗೊಂಡಿದೆ ಎಂದರು.
ರಾಮಡ್ಕ ಕಂಡತ್ತಡ್ಕ ಶ್ರೀ ಶಿರಾಡಿ ಗ್ರಾಮ ದೈವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಗೌಡ ಕುಂಡಡ್ಕ ಮಾತನಾಡಿ, ಇಲ್ಲಿನ ಭಜನಾ ಮಂದಿರದಲ್ಲಿ ಪ್ರತಿವಾರ ನಡೆಯುವ ಭಜನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಮನೆ ಮನೆಯಲ್ಲೂ ಭಜನೆ ನಡೆಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಮುಂಡಾಳ ಮತ್ರಾಡಿ ಮಾತನಾಡಿ, ಎಲ್ಲರ ಸಹಕಾರದಿಂದ ೫ ತಿಂಗಳಲ್ಲಿ ಭಜನಾ ಮಂದಿರ ನಿರ್ಮಾಣಗೊಂಡಿದೆ. ಈ ಭಾಗದ ಪ್ರತಿಮನೆಯ ಒಂದಿಬ್ಬರು ಸದಸ್ಯರು ವಾರದ ಭಜನೆಯಲ್ಲಿ ಭಾಗವಹಿಸಬೇಕು. ಇದರಿಂದ ಇಲ್ಲಿನ ಸಾನಿಧ್ಯವೂ ವೃದ್ಧಿಯಾಗಲಿದೆ ಎಂದರು. ಕಡಬ ವಲಯ ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಭಜನಾ ಮಂದಿರದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಡಾ.ಕುಮಾರ ಸುಬ್ರಹ್ಮಣ್ಯ ಭಟ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಭಜನಾ ಮಂದಿರದ ಉತ್ಸವ ಸಮಿತಿ ಅಧ್ಯಕ್ಷ ಯತೀಶ ಕುಂಡಡ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಉದಯಶಂಕರ ಭಟ್ ಬಲ್ಲಾಲಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂತೂರುಪದವು ಅದಿತಿ ಟ್ರಾನ್ಸ್‌ಪೋರ್ಟ್ ಮಾಲಕ ಸುರೇಶ್ ಕೆ.ಕುಂಡಡ್ಕ ಹಾಗೂ ಗಾಯತ್ರಿಸುರೇಶ್ ದಂಪತಿ ಸ್ವಾಮೀಜಿಗೆ ಫಲತಾಂಬೂಲ ಸಮರ್ಪಿಸಿದರು. ಸುಬ್ರಹ್ಮಣ್ಯ ಕೆಂದ್ರಾಜೆ, ಸೋಮಪ್ಪ ಗೌಡ ಎರ್ಮಾಳ, ಪ್ರಶಾಂತ ಭಟ್, ರಾಜು ಪಿ.ಜಿ., ಪದ್ಮನಾಭ ಕೆಂದ್ರಾಜೆ, ಪೂರ್ಣಿಮಾ, ದಿಕ್ಷಿತ್ ಅಲಂಗಪೆ, ನಿಧೀಶ್ ಅಲಂಗಪೆ, ವಸಂತ ಜಾಲುಮನೆ, ಸೋಮನಾಥ ಮಣಿಕ್ಕಳ, ಲಕ್ಷ್ಮೀನಾರಾಯಣರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪದ್ಮನಾಭ ಗೌಡ ಎರ್ಮಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಗೌಡ ಎರ್ಮಾಳ ಸ್ವಾಗತಿಸಿದರು. ಶಶಿಕಿರಣ್ ಶೆಟ್ಟಿ ವಂದಿಸಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ವಿಶ್ವೇಶ್ವರ ಭಟ್ ಬಲ್ಲಾಳಿಕೆ, ಸುಬ್ರಹ್ಮಣ್ಯ ಭಟ್ ಜೋಗೋಡಿ, ವಿಷ್ಣುಭಟ್ ಬೀರಂತಡ್ಕರವರ ಪರವಾಗಿ ಅವರ ಪುತ್ರ ಶ್ಯಾಮ್ ಭಟ್, ಬಾಬು ಗೌಡ ಕುಂಡಡ್ಕ, ಭಜನಾ ತರಬೇತುದಾರರಾದ ಕೃಷ್ಣಪ್ಪ ಪೂಜಾರಿ ಅಮೈ, ಶೇಖರ ಗೌಡ ಕೆದ್ದೊಟ್ಟೆರವರನ್ನು ಭಜನಾ ಮಂದಿರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಭಜನಾ ಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕುಂತೂರುಪದವು ಅದಿತಿ ಟ್ರಾನ್ಸ್‌ಪೋರ್ಟ್ ಮಾಲಕ ಸುರೇಶ್ ಕೆ.ಕುಂಡಡ್ಕ ಹಾಗೂ ನೃತ್ಯ ಭಜನಾಪಟುಗಳಿಗೆ ಗೌರವಾರ್ಪಣೆ ಮಾಡಲಾಯಿತು.

ವಿವಿಧ ತಂಡಗಳಿಂದ ಭಜನೆ:
ಎ.18ರಂದು ಬೆಳಿಗ್ಗೆ ಗಣಹೋಮ ನಡೆಯಿತು. 9.57ರ ಮಿಥುನ ಲಗ್ನದಲ್ಲಿ ನೂತನ ಭಜನಾ ಮಂದಿರದ ಲೋಕಾರ್ಪಣೆ ನಡೆಯಿತು. ಸುರೇಶ್ ಕೆ.ಕುಂಡಡ್ಕ ಲೋಕಾರ್ಪಣೆಗೊಳಿಸಿದರು. ಬಳಿಕ ಸಂಜೆ ತನಕ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ ಕುಣಿತ ಭಜನೆ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ಬಳಿಕ ಸಂಸಾರ ಕಲಾವಿದೆರ್ ಬಲ್ನಾಡು, ಪುತ್ತೂರು ಇವರಿಂದ ’ ಮಾರ್ನೆಮಿ ಬದುಕೊಂಜಿ ಏಸ’ ತುಳುನಾಟಕ ಪ್ರದರ್ಶನಗೊಂಡಿತು.