ಪ್ರವಾದಿಯನ್ನು ಮನಸ್ಸಿನಂತರಾಳದಿಂದ ಪ್ರೀತಿಸಿ-ಜಾಬಿರ್ ಅಹ್ಸನಿ
ಪುತ್ತೂರು: ಇತಿಹಾಸ ಪ್ರಸಿದ್ಧ ಇರ್ದೆ-ಪಳ್ಳಿತ್ತಡ್ಕ ಮಖಾಂ ಉರೂಸ್ ಎ.20ರಂದು ಉದ್ಘಾಟನೆಗೊಂಡಿತು.ಕೊರಿಂಗಿಲ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಿದ್ದರು.
ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೆರವೇರಿಸಿದರು.
ಉದ್ಘಾಟಿಸಿದ ಕೊರಿಂಗಿಲ ಜುಮಾ ಮಸೀದಿಯ ಖತೀಬ್ ಜಿ.ಎಚ್ ಅಯ್ಯೂಬ್ ವಹಬಿ ಗಡಿಯಾರ ಮಾತನಾಡಿ ಇರ್ದೆ-ಪಳ್ಳಿತ್ತಡ್ಕ ದರ್ಗಾ, ಜಾತಿ ಮತ ಬೇಧವಿಲ್ಲದೇ ಎಲ್ಲರೂ ಆಗಮಿಸುವ ಕೇಂದ್ರವಾಗಿದ್ದು ಅಸಂಖ್ಯಾತ ಮಂದಿ ಇಲ್ಲಿಗೆ ಬಂದು ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳಿದರು. ಅಲ್ಲಾಹನ ಇಷ್ಟದಾಸರ ರೀತಿಯ ಜೀವನ ನಡೆಸಲು ನಮಗೆ ಸಾಧ್ಯವಿಲ್ಲದಿದ್ದರೂ ಅವರನ್ನು ಗೌರವಿಸಬೇಕು, ಅವರ ಸ್ನೇಹ ಸಂಪಾದನೆ ಮಾಡಬೇಕು ಎಂದ ಅವರು ಅಲ್ಲಾಹು ಗೌರವಿಸಿದವರನ್ನು ನಾವು ಗೌರವಿಸಬೇಕು, ಅಲ್ಲಾಹು ಗೌರವಿಸಿದ ವಸ್ತು, ಸ್ಥಳಗಳನ್ನು ನಾವೂ ಗೌರವಿಸಬೇಕು, ಹಾಗಾದರೆ ಮಾತ್ರ ಇಹಪರ ಜಯ ಸಾಧ್ಯ ಎಂದು ಅವರು ಹೇಳಿದರು.


ಪ್ರವಾದಿಯನ್ನು ಮನಸ್ಸಿನಂತರಾಳದಿಂದ ಪ್ರೀತಿಸಿ:
‘ಪ್ರವಾಜಗ ಸ್ನೇಹಂ’ ಎನ್ನುವ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಡಾ.ಜಾಬಿರ್ ಅಹ್ಸನಿ ಮಾತನಾಡಿ ಪ್ರವಾದಿ ಮುಹಮ್ಮದ್(ಸ.ಅ) ಸರ್ವಕಾಲಕ್ಕೂ ನಮಗೆ ಮಾದರಿ ನಾಯಕರಾಗಿದ್ದು ಅವರು ನಮಗೆ ತೋರಿಸಿದ ಹಾದಿಯೇ ನೈಜ ವಿಜಯದ ಹಾದಿಯಾಗಿದೆ, ಪ್ರವಾದಿಯವರ ಆಚಾರ, ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವನು ಯಾವತ್ತೂ ಪ್ರವಾದಿ ಅನುಯಾಯಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರವಾದಿ(ಸ.ಅ) ಅವರ ಜೀವನದ ಬಗ್ಗೆ ನಾವು ತಿಳಿಯಬೇಕು, ಅವರ ಜೀವನ ವಿಧಾನ, ತ್ಯಾಗದ ಕುರಿತು ನಮ್ಮ ಮಕ್ಕಳಿಗೂ ತಿಳಿಸಬೇಕು, ಪ್ರವಾದಿ ಮುಹಮ್ಮದ್(ಸ.ಅ) ಅವರನ್ನು ಮನಸ್ಸಿನಂತರಾಳದಿಂದ ಪ್ರೀತಿಸಬೇಕು ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ನಮಾಜ್ನ್ನು ಕಡ್ಡಾಯವಾಗಿ ನಿರ್ವಹಿಸಬೇಕು, ನಮಾಜ್ ನಿರ್ಲಕ್ಷಿಸುವವನ ಯಾವುದೇ ಸತ್ಕಾರ್ಯವನ್ನು ಅಲ್ಲಾಹು ಸ್ವೀಕರಿಸಲಾರ ಎಂದು ಜಾಬಿರ್ ಅಹ್ಸನಿ ಹೇಳಿದರು.
ವೇದಿಕೆಯಲ್ಲಿ ಕೊರಿಂಗಿಲ ಜುಮಾ ಮಸೀದಿಯ ಉಪಾಧ್ಯಕ್ಷ ಆಲಿಕುಂಞಿ ಹಾಜಿ ಕೊರಿಂಗಿಲ, ಪ್ರ.ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಕೋಶಾಧಿಕಾರಿ ಮಹಮ್ಮದ್ ಹಾಜಿ ಶಾಲಾಬಳಿ, ಎಂಪೆಕಲ್ಲು ಮಸೀದಿಯ ಮುಅಲ್ಲಿಂ ಸ್ವಾದಿಕ್ ಮುಸ್ಲಿಯಾರ್, ಉರೂಸ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಂ, ಕಾರ್ಯದರ್ಶಿ ಕೆ.ಎಂ ಹಮೀದ್ ಕೊಮ್ಮೆಮ್ಮಾರ್, ಉಪಾಧ್ಯಕ್ಷ ಶಾಫಿ ಕೇಕನಾಜೆ, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಶಾಹುಲ್ ಹಮೀದ್ ಕೀಲಂಪಾಡಿ, ಅಬೂಬಕ್ಕರ್ ಮದನಿ ಕೊರಿಂಗಿಲ, ಅಬೂ ಗಫೂರ್ ಉಸ್ತಾದ್ ಉಪಸ್ಥಿತರಿದ್ದರು.
ಅಬ್ದುಲ್ಲ ಮೌಲವಿ ಬೆಂಗತ್ತಡ್ಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.