’ಸುಬೋಧ’ಕವನ ಸಂಕಲನ ಬಿಡುಗಡೆ

0

ಪುತ್ತೂರು: ಪಟ್ಟಾಜೆ ಸುಬ್ರಹ್ಮಣ್ಯ ಭಟ್ಟ ವಿರಚಿತ “ಸುಬೋಧ” ಕವನ ಸಂಕಲನದ ಬಿಡುಗಡೆ ಸಮಾರಂಭ ಖ್ಯಾತ ನ್ಯಾಯವಾದಿ, ವಿವೇಕಾನಂದ ಹಿರಿಯ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಪುರಂದರ ಭಟ್ಟರ ಮಾಲಕತ್ವದ ಅನುರಾಗ ವಠಾರದಲ್ಲಿ ಎ.೨೦ರಂದು ಬಿಡುಗಡೆಗೊಂಡಿತು.

ಪೆರ್ನಾಜೆ ಶ್ರೀ ಸೀತಾರಾಘ ಹಿರಿಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಕೆ.ಶಾಮಣ್ಣ ಅವರು ಕವನ ಸಂಕಲನ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಕೆ.ಶಾಮಣ್ಣರವರು, ಕೃತಿಯಲ್ಲಿರುವ ಕವನಗಳು ಬದುಕಿಗೆ ಹತ್ತಿರವಾದ ವಿಚಾರಗಳನ್ನು ಒಳಗೊಂಡಿದೆ. ಎಲ್ಲಾ ಕವನಗಳು ವೈವಿಧ್ಯಮಯವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಗೋಪಾಲಕೃಷ್ಣ ಭಟ್ಟ ಬದಿಯಡ್ಕರವರು, ಕವನಗಳು ಏಳು ವಿಭಾಗಗಳಾಗಿ ಹಂಚಿಹೋಗಿದ್ದ ಭಕ್ತಿಗೀತೆ, ಗೀತಪಾಠ, ಶೈಕ್ಷಣಿಕ ಸಾಮಾಜಿಕ ಮುಂತಾದ ವಿಚಾರಗಳನ್ನು ಒಳಗೊಂಡಿದೆ ಎಂದು ಹೇಳಿದರು. ಬೆನ್ನುಡಿ ಬರೆದ ಮಂಗಳೂರಿನ ವಕೀಲರಾದ ಕೃಷ್ಣ ಭಟ್ಟರವರು ಮಾತನಾಡಿ, ಯೋಗ್ಯತೆಗಿಂತ ಬಂಧುತ್ವದ ಯೋಗ ಇಲ್ಲಿ ಹೆಚ್ಚು ಕೆಲಸ ಮಾಡಿದೆ ಎಂದರು. ತಮ್ಮ ಅಜ್ಜನವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯ ಹೊಂದಿದ್ದು ಕವನಗಳನ್ನು ಬರೆಯುತ್ತಿದ್ದರು. ಅವರ ಪ್ರಭಾವ ಮೊಮ್ಮಗನಾದ ಪಟ್ಟಾಜೆ ಸುಬ್ರಹ್ಮಣ್ಯ ಭಟ್ಟರ ಮೇಲೆ ಬೀರಿರುವುದು ಕಂಡುಬರುತ್ತದೆ. ಕೃತಿಕಾರರು ಇನ್ನಷ್ಟು ಸಾಹಿತ್ಯಸೇವೆ ಮಾಡಲೆಂದು ಹೇಳಿದರು.


ಶುಭಾಶಂಸನೆ ಮಾಡಿದ ಬಿ ಐತ್ತಪ್ಪ ನಾಯ್ಕರವರು, ಕೃತಿಕಾರರ ಬಗ್ಗೆ ಹಿಂದಿನಿಂದಲೂ ಪರಿಚಯವಿದ್ದು ನಿವೃತ್ತ ನೌಕರರ ಸಂಘದ ವಾರ್ಷಿಕ ಸಂಚಿಕೆಯಲ್ಲಿ ಅವರ ಅನೇಕ ಕವನಗಳು ಪ್ರಕಟಗೊಂಡಿವೆ. ಅವರ ಲೇಖನಿಯಿಂದ ಕಥೆ, ಕಾದಂಬರಿಗಳು ಮುಂದಕ್ಕೆ ಪ್ರಕಟವಾಗಲೆಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಹಿರಿಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ, ಆಂಗ್ಲ ಭಾಷಾ ತಜ್ಞರೂ ಆದ ಎಚ್.ಮಾಧವ ಭಟ್ಟರವರು ಮಾತನಾಡಿ, ಸುಭೋದ ಕವನ ಸಂಕಲನದಲ್ಲಿ ಸೂಕ್ತ ಜಾಗದಲ್ಲಿ ಸರಿಯಾದ ಪದಗಳ ನಿರ್ವಹಣೆ ಪ್ರಾಸಬದ್ಧವಾದ ಸಾಲುಗಳು ಹಾಗೂ ಕವಿತೆಗಳ ಲಾಲಿತ್ಯದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಕೃತಿಕಾರರಿಗೆ ಅಭಿನಂದನೆ ಸಲ್ಲಿಸಿದರು.

ಸುಳ್ಯ ಭಾವನಾ ಸಂಗೀತ ಶಾಲೆಯ ನಿರ್ದೇಶಕ ಕೆ.ಆರ್.ಗೋಪಾಲಕೃಷ್ಣರರು ಕವನಗಳ ಆಯ್ದ ಕೆಲವು ಕವಿತೆಗಳನ್ನು ಹಾಡಿ ರಂಜಿಸಿದರು. ಸೂರ್ಯನಾರಾಯಣ ಪಟ್ಟಾಜೆ ಸ್ವಾಗತಿಸಿದರು. ಸೀಮಾಸೂರ್ಯ ನಾರಾಯಣ ನಿರೂಪಣೆ ಮಾಡಿದರು. ಪರಿಣಿತಿ, ಜೀವಿಕ, ಉನ್ನತಿ ಹಾಗೂ ಜನಕ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here