ಮೇ.1ಕ್ಕೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ, ಸಂಘದ ಮಹಾಸಭೆ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಸ್ಥಾಪನಾ ದಿನವಾದ ಮೇ.1ರಂದು ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಮಹಾಸಭೆಯು ಅದೇ ದಿನ ನಡೆಯಲಿದೆ. ಕಾರ್ಯಕ್ರಮ ಬೆಳಿಗ್ಗೆ ಗಂಟೆ 9.30ಕ್ಕೆ ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಸಂಘದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಆರಂಭಿಸಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭಿಸಲಾಗಿದ್ದು, ಈ ಭಾರಿ ಯಕ್ಷಗಾನ ಸಾಧಕ ಡಾ| ಎಂ.ಪ್ರಭಾಕರ ಜೋಶಿಯವರಿಗೆ ’ಸ್ವರ್ಣ ಸಾಧನಾ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸನ್ಮಾನದಲ್ಲಿ ರೂ.15 ಸಾವಿರ ನಗದು, ಹಾರ ಸ್ಮರಣಿಕೆ, ಫಲಕವಿರುತ್ತದೆ. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಅಧ್ಯಕ್ಷ ಡಾ| ಎಲ್ ಬೈರಪ್ಪ ಅವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ರಾಷ್ಟ್ರಮಟ್ಟದ ವಿವಿಧ ಕ್ಷೇತ್ರದದಲ್ಲಿ ಸಾಧನೆ ಮಾಡಿದ 6 ಜನ ಸಾಧಕರನ್ನು ಅಭಿನಂದಿಸಲಾಗುವುದು. ಅದರಲ್ಲಿ ಕೆಮ್ಮಿಂಜೆ ನಿವಾಸಿ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ಎಂ.ಡಿ.ಎಸ್ ವಿದ್ಯಾರ್ಥಿನಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ 2023ರಲ್ಲಿ ದೆಹಲಿ ರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ 2025ರಲ್ಲಿ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡಿನ ಕಮಾಂಡರ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿದ ಡಾ|ವಜೀದಾಭಾನು, ವಿವೇಕಾನಂದ ಕಾಲೇಜಿನ 2ನೇ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿರುವ ಎನ್.ಸಿ.ಸಿ ಘಟಕದ ದೆಹಲಿ ಗಣರಾಜ್ಯೋತ್ಸವದಲ್ಲಿ ಪ್ರಧಾನ ಮಂತ್ರಿ ರ‍್ಯಾಲಿಯಲ್ಲಿ ಪಾಲ್ಗೊಂಡಿರುವ ಮಾ| ಸುಜಿತ್, ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಎನ್‌ಸಿಸಿ ಘಟಕದ ವತಿಯಿಂದ ದೆಹಲಿ ಗಣರಾಜ್ಯೋತ್ಸವದಲ್ಲಿ ಕರ್ತವ್ಯ ಪಥದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಲಹರಿ, ಬಿಬಿಎ ವ್ಯಾಸಾಂಗ ಮಾಡುತ್ತಿದ್ದು ಎನ್‌ಸಿಸಿ ಘಟಕದಿಂದ ದೆಹಲಿ ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಶುಭದ ಆರ್ ಪ್ರಕಾಶ್, ಪುತ್ತೂರು ನಿವಾಸಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2ನೇ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ಎನ್‌ಸಿಸಿ ಘಟಕದಿಂದ ದೆಹಲಿ ಗಣರಾಜ್ಯೋತ್ಸವದಲ್ಲಿ ಕರ್ತವ್ಯಪಥದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಮಾ.ಹಾರ್ದಿಕ್ ಹೆಚ್ ಶೆಟ್ಟಿ, ವೆಟರನ್ಸ್ ಆಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ 43ನೇ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ದ್ವಿತಿಯ ಮತ್ತು 5 ಕಿ ಮೀ ನಡಿಗೆಯಲ್ಲಿ ತೃತೀಯ ಸ್ಥಾನಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಬೊಳುವಾರು ಪ್ರಗತಿ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿನೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು.

ಇದೇ ಸಂದರ್ಭ ಸಂಘದ ಶಾಶ್ವತ ನಿಧಿಗೆ ಮಹತ್ತರ ಕೊಡುಗೆ ನೀಡಿದ ಸಂಘದ 13 ಮಂದಿ ಸದಸ್ಯರನ್ನು ಸನ್ಮಾನಿಸಲಾಗುವುದು. 90 ವರ್ಷ ಪ್ರಾಯ ದಾಟಿದ 11, 85 ವರ್ಷ ಪ್ರಾಯ ದಾಟಿದ 11, 80 ವರ್ಷ ಪ್ರಾಯ ದಾಟಿದ 18 ಹಾಗು 75 ವರ್ಷ ಪೂರ್ಣಗೊಳಿಸಿದ 31 ಮಂದಿ ಸದಸ್ಯರನ್ನು ಸನ್ಮಾನಿಸಲಾಗುವುದು. ಅಪರಾಹ್ನ ಸಂಘದ ವಾರ್ಷಿಕ ಮಹಾಸಭೆಯು ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಪ್ರೊ. ವತ್ಸಲಾ ರಾಜ್ಞಿ, ಕಾರ್ಯದರ್ಶಿ ತಿರುಮಲೇಶ್ವರ ಭಟ್ ಪಿ, ಕೋಶಾಧಿಕಾರಿ ಸೂರಪ್ಪ ಗೌಡ ಜಿ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here