ಗ್ರಾಮಸಭೆಯಲ್ಲಿ ಮಂಡಿಸಿದ ಲೆಕ್ಕಾಚಾರದಲ್ಲಿ ಲೋಪ ಆರೋಪ-ಸದಸ್ಯರ ಮಧ್ಯೆ ತೀವ್ರ ಚರ್ಚೆ
ಪುತ್ತೂರು: ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಇತ್ತೀಚೆಗೆ ನಡೆದ ಗ್ರಾಮಸಭೆ ಅರ್ದದಲ್ಲಿ ಮೊಟಕುಗೊಂಡ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡು ಸುಮಾರು ಹೊತ್ತು ಅದರದ್ದೇ ಚರ್ಚೆ ನಡೆಯಿತು. ಗ್ರಾಮ ಸಭೆಯಲ್ಲಿ ಮಂಡಿಸಿದ ಆಯವ್ಯಯ ಪಟ್ಟಿಯಲ್ಲಿ ಲೋಪವಿದ್ದು, ತಪ್ಪು ಲೆಕ್ಕಾಚಾರವನ್ನು ಗ್ರಾಮಸ್ಥರ ಮುಂದೆ ಮಂಡಿಸಲಾಗಿದೆ ಎಂದು ಸದಸ್ಯ ಕಮಲೇಶ್ ಎಸ್.ವಿ ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಕರುಣಾಕರ ಗೌಡ ಎಲಿಯ, ಉಮೇಶ್ ಗೌಡ ಅಂಬಟ, ಬಾಲಕೃಷ್ಣ ಪೂಜಾರಿ ಮೊದಲಾದವರು ಮಾತನಾಡಿ ನಿಮಗೆ ಗ್ರಾ.ಪಂ ಮೇಲೆ ಗೂಬೆ ಕೂರಿಸುವುದು, ತಪ್ಪು ಹುಡುಕುವುದೇ ಕೆಲಸ, ಗ್ರಾಮ ಸಭೆ ನಡೆಯದ ಹಾಗೆ ಮಾಡಿ ಗ್ರಾಮಸ್ಥರಿಗೆ ತೊಂದರೆ ನೀಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಾಲಕೃಷ್ಣ ಪೂಜಾರಿ ಮತ್ತು ಕಮಲೇಶ್ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ಗ್ರಾಮಸ್ಥರ ಸಂಖ್ಯೆ ಕಡಿಮೆ ಇದ್ದ ಕಾರಣ ಗ್ರಾಮ ಸಭೆ ಅರ್ದದಲ್ಲಿ ನಿಂತಿತ್ತು, ಅಲ್ಲಿ ಮಂಡಿಸಿದ ಲೆಕ್ಕಾಚಾರ ಸರಿಯಿಲ್ಲ ಎನ್ನುವಾಗ ನೀವು ಬೇರೆ ಏನೋ ಮಾತನಾಡಿ ವಿಷಯಾಂತರ ಮಾಡುತ್ತಿದ್ದೀರಿ ಎಂದು ಕಮಲೇಶ್ ಹೇಳಿದರು. ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಗ್ರಾಮ ಸಭೆಗೆ ಬಂದಿದ್ದ ನಾಲ್ಕು ಮಂದಿಯನ್ನು ಬಿಟ್ಟು ಉಳಿದವರಿಗೆ ಸಭೆ ಬೇಕಿತ್ತು, ಆ ನಾಲ್ಕು ಮಂದಿ ಸೇರಿಕೊಂಡು ಎಲ್ಲವನ್ನೂ ಮಾಡಿದ್ದಾರೆ, ಅವರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೂಡಿಸಿದರು. ಸದಸ್ಯ ಕಮಲೇಶ್ ಮಾತನಾಡಿ ಸಭೆಗೆ ಜನರೇ ಬಾರದಿದ್ದರೂ ಒಟ್ಟಾರೆಯಾಗಿ ನಿಮಗೆ ಸಭೆ ನಡೆಯಬೇಕು, ಕಾಟಾಚಾರಕ್ಕೆ ಸಭೆ ಮಾಡಬೇಡಿ ಎಂದು ಗ್ರಾಮಸ್ಥರು ಸಭೆ ನಿಲ್ಲಿಸಿದ್ದಾರೆ, ತಪ್ಪು ಲೆಕ್ಕಾಚಾರವನ್ನು ಸಭೆಗೆ ಮಂಡಿಸಿ ಅದನ್ನೂ ಸಮರ್ಥನೆ ಮಾಡುತ್ತೀರಲ್ಲಾ ನಿಮಗೆಲ್ಲಾ ನಾಚಿಕೆಯಾಗಬೇಕು ಎಂದು ಹೇಳಿದರು. ಮಹಮ್ಮದ್ ಆಲಿ ಮಾತನಾಡಿ ಗ್ರಾಮಸ್ಥರಿಗೆ ಲೆಕ್ಕಾಚಾರ ತಪ್ಪು ಕೊಟ್ಟಿರುವುದು ಸರಿಯಲ್ಲ ಎಂದು ಹೇಳಿದರು. ಸದಸ್ಯ ಉಮೇಶ್ ಗೌಡ ಅಂಬಟ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಮ್ಮ ಪಂಚಾಯತ್‌ಗೆ ಶ್ರದ್ಧಾಂಜಲಿ ಅರ್ಪಿಸಿ ಸಂದೇಶ ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡಿ..?
ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ಲೆಕ್ಕಾಚಾರ ಸರಿಯಿಲ್ಲ, ಗ್ರಾ.ಪಂ ಆಡಳಿತ ಸರಿಯಿಲ್ಲ ಎಂದು ಆರೋಪಿಸುವವರು ಗ್ರಾ.ಪಂನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡಿ ಎಂದು ಹೇಳಿದರು. ಮಾತು ಮುಂದುವರಿಸಿದ ಕರುಣಾಕರ ಗೌಡ ಅವರು ಸಿಬ್ಬಂದಿ ನೇಮಕ ಮಾಡದ ಸರಕಾರಕ್ಕೆ ಧಿಕ್ಕಾರ ಎಂದು ಆಕ್ರೋಶಭರಿತರಾಗಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ಈಗಾಗಲೇ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿ ನೇಮಕ ಆಗಿದ್ದು ನೀವು ಸರಕಾರಕ್ಕೆ ಧಿಕ್ಕಾರ ಕೂಗಿದ್ದು ತಪ್ಪು ಎಂದು ಹೇಳಿದರು. ತಾತ್ಕಾಲಿಕ ನೇಮಕಗೊಂಡ ಸಿಬ್ಬಂದಿಗಳಿಗೆ ಪೂರ್ಣ ಅಧಿಕಾರ ಇರುವುದಿಲ್ಲ ಎಂದು ಕರುಣಾಕರ ಗೌಡ ಎಲಿಯ ಹೇಳಿದರು.
ನೀರಿನ ನಿರ್ವಹಣೆ ಜವಾಬ್ದಾರಿ ಕಾರ್ಯದರ್ಶಿಗೆ ನೀಡಿ:
ಗ್ರಾ.ಪಂ ವ್ಯಾಪ್ತಿಯ ನೀರಿನ ನಿರ್ವಹಣೆಯ ಜವಾಬ್ದಾರಿಯನ್ನು ಒಬ್ಬರಿಗೇ ಕೊಟ್ಟು ಬಾಕಿ ಬಿಲ್ ಸಂಗ್ರಹ ಸೇರಿದಂತೆ ನೀರಿನ ವಿಚಾರದ ಸಂಪೂರ್ಣ ಜವಾಬ್ದಾರಿಯನ್ನು ಕೊಡಬೇಕು, ಕಾರ್ಯದರ್ಶಿಯವರಿಗೆ ಕೊಟ್ಟರೆ ಉತ್ತಮ ಎಂದು ಕಮಲೇಶ್ ಎಸ್.ವಿ ಹೇಳಿದರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು.

ನೀರಿನ ಟ್ಯಾಂಕಲ್ಲಿ ಹೆಗ್ಗಣದ ತುಂಡು..!
ಗ್ರಾ.ಪಂ ವ್ಯಾಪ್ತಿಯ ನೀರಿನ ಟ್ಯಾಂಕ್‌ನ್ನು ಶುದ್ದೀಕರಿಸುವ ಕಾರ್ಯ ಆಗಬೇಕು, ನಮ್ಮ ಗ್ರಾ.ಪಂ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶವೊಂದರ ನೀರಿನ ಟ್ಯಾಂಕ್‌ನಲ್ಲಿ ಹೆಗ್ಗಣದ ತುಂಡು ಇತ್ತೀಚೆಗೆ ಪತ್ತೆಯಾಗಿತ್ತು, ಈ ಬಗ್ಗೆ ತುರ್ತು ಗಮನಹರಿಸಬೇಕಾದ ಅವಶ್ಯಕತೆಯಿದೆ ಎಂದು ಸದಸ್ಯ ಮಹಮ್ಮದ್ ಆಲಿ ನೇರೋಳ್ತಡ್ಕ ಹೇಳಿದರು. ಧ್ವನಿಗೂಡಿಸಿದ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ನೀರಿನ ಟ್ಯಾಂಕ್‌ನ್ನು ಒಮ್ಮೆ ಕ್ಲೀನ್ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಕೆಮ್ಮಿಂಜೆಗೆ ವಾರದೊಳಗೆ ದಾರಿದೀಪ ಅಳವಡಿಸಿ:
ಕೆಮ್ಮಿಂಜೆ ಪ್ರದೇಶಕ್ಕೆ ದಾರಿದೀಪ ವ್ಯವಸ್ಥೆ ಮಾಡಬೇಕು ಎಂದು ಬಾಬು ಕಲ್ಲಗುಡ್ಡೆ ಆಗ್ರಹಿಸಿದರು. ವ್ಯವಸ್ಥೆ ಮಾಡುವ ಎಂದು ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಭರವಸೆ ನೀಡಿದರು. ಭರವಸೆ ಸಾಲದು ಒಂದು ವಾರದೊಳಗೆ ವ್ಯವಸ್ಥೆ ಮಾಡಬೇಕು ಎಂದು ಬಾಬು ಕಲ್ಲಗುಡ್ಡೆ ಹೇಳಿದರು.
ಕರ್ಮಿನಡ್ಕದಲ್ಲಿ ಬೋರ್‌ವೆಲ್ ಇದ್ದರೂ ಪ್ರಯೋಜನವಿಲ್ಲ:
ಸೊರಕೆ ಸಮೀಪದ ಕರ್ಮಿನಡ್ಕದಲ್ಲಿ ಈ ಹಿಂದೆ ತೆಗೆಸಿದ್ದ ಬೋರ್‌ವೆಲ್‌ಗೆ ಪಂಪು ಇಳಿಸಿ 5 ವರ್ಷ ಆದರೂ ಅದಕ್ಕೆ ಟಿಸಿ ವಿದ್ಯುತ್ ಕನೆಕ್ಷನ್ ಮಾಡಿಲ್ಲ, ಅದನ್ನು ಹಾಗೆಯೇ ಬಿಟ್ಟರೆ ಏನು ಪ್ರಯೋಜನ, ಅಲ್ಲಿಗೆ ಬೇಕಾದ ವ್ಯವಸ್ಥೆ ಮಾಡಬೇಕು ಎಂದು ಕಮಲೇಶ್ ಎಸ್.ವಿ ಹೇಳಿದರು. ಇಂತಹ ಸಮಸ್ಯೆ ಅಥವಾ ನೀರಿನ ಸಮಸ್ಯೆಗಳ ವಿಚಾರದಲ್ಲಿ ಆಯಾ ಏರಿಯಾದ ಸದಸ್ಯರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಪಿಡಿಓ ಮನ್ಮಥ ಹೇಳಿದರು.
ಜನಿವಾರ ತೆಗೆಯಲು ಹೇಳಿರುವುದು ಖಂಡನೀಯ:
ಇತ್ತೀಚೆಗೆ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಯಲು ಅಧಿಕಾರಿಗಳು ಸೂಚಿಸಿದ್ದು ಖಂಡನೀಯ. ಇದು ಅಕ್ಷಮ್ಯ ಅಪರಾಧವಾಗಿದ್ದು ಆ ಅಧಿಕಾರಿಗಳ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಕುಮಾರ್ ಪುತ್ತಿಲ ಹೇಳಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ಸೂರಪ್ಪ, ದುಗ್ಗಪ್ಪ ಕಡ್ಯ, ಪ್ರೇಮಾ, ಅರುಣಾ ಎ.ಕೆ, ಕಾವ್ಯ ಕಡ್ಯ, ರಸಿಕಾ ರೈ ಮೇಗಿನಗುತ್ತು, ಕಮಲ, ವಿಜಯ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಪಿಡಿಓ ಮನ್ಮಥ ಸ್ವಾಗತಿಸಿದರು. ಸಿಬ್ಬಂದಿಗಳಾದ ಶಶಿಧರ ಕೆ ಮಾವಿನಕಟ್ಟೆ, ಸತೀಶ, ಶ್ರದ್ಧಾ ಸಹಕರಿಸಿದರು.