ತಿಬಿಲೆ ದೀಪದ ಬೆಳಕಿನಲ್ಲಿ ಮೌನ ಮೆರೆವಣಿಗೆ, ನುಡಿ ನಮನ
ಭಯೋತ್ಪಾದನ ಚಟುವಟಿಕೆ ನಿರ್ನಾಮ ಆಗುವ ತನಕ ವಿರಮಿಸಬಾರದು: ರಾಮಚಂದ್ರ ಕೋಡಿಬೈಲು
ಎಲ್ಲಕ್ಕಿಂತಲೂ ದೇಶ ನಮಗೆ ಮೊದಲು: ಜಗನ್ನಾಥ ಪೂಜಾರಿ ಮುಕ್ಕೂರು

ಮುಕ್ಕೂರು: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಭಾರತೀಯರ ಮೇಲೆ ಗುಂಡಿಕ್ಕಿ 26 ಮಂದಿಯನ್ನು ಕೊಂದಿರುವ ಘಟನೆಯನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಗ್ರರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು ಹೇಳಿದರು.
ಮುಕ್ಕೂರು ವಾರ್ಡ್ ನಾಗರಿಕ ವೇದಿಕೆಯ ಆಶ್ರಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಮುಕ್ಕೂರು ಬಸ್ ಪ್ರಯಾಣಿಕರ ತಂಗುದಾಣದ ಬಳಿ ಎ.26ರಂದು ರಾತ್ರಿ ನಡೆದ ಸಂತಾಪ ಸೂಚಕ ಮತ್ತು ಖಂಡನಾ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಭಯೋತ್ಪಾದಕರಿಗೆ ಧರ್ಮ ಇಲ್ಲ. ಅವರ ಧಾಳಿ ಭಾರತೀಯರ ವಿರುದ್ಧದು. ಹಾಗಾಗಿ ಭಾರತದ ನೆಲದಲ್ಲಿ ಇರುವ ಎಲ್ಲರೂ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಕಾಶ್ಮೀರ ಎಂದೆಂದಿಗೂ ನಮ್ಮದು. ಅಲ್ಲಿ ಇನ್ನೆಂದೂ ಪಾಕಿಸ್ತಾನವಾಗಲೀ, ಉಗ್ರರೂ ಪ್ರವೇಶ ಮಾಡಬಾರದು. ಅಂತಹ ಕಠಿನ ಶಿಕ್ಷೆಯನ್ನು ಸರಕಾರ ಜಾರಿ ಮಾಡಬೇಕು. ಸರಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ಪ್ರತಿ ಭಾರತೀಯನೂ ಬೆಂಬಲ ಸೂಚಿಸಬೇಕು ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಭಾರತ ಸರ್ವ ಜಾತಿ, ಧರ್ಮಿಯರ ನೆಲೆ. ಕಾಶ್ಮೀರದ ಉಗ್ರರ ದಾಳಿಯನ್ನು ಇಡೀ ಭಾರತವೇ ಖಂಡಿಸಿದೆ. ಉಗ್ರವಾದವನ್ನು ಸಂಪೂರ್ಣ ನಿರ್ನಾಮ ಮಾಡಲು ಸರಕಾರದ ಜತೆಗೆ ನಾವೆಲ್ಲರೂ ಸಹಕಾರ ನೀಡಬೇಕು. ಇದಕ್ಕಾಗಿ ಜಾತಿ, ಮತ, ಧರ್ಮ ಮೀರಿ ನಾವೆಲ್ಲರೂ ಒಂದಾಗಬೇಕು. ಮುಕ್ಕೂರಿನಲ್ಲಿ ನಾವೆಲ್ಲರೂ ಒಂದುಗೂಡಿ ಉಗ್ರರ ಹೇಯ ಕೃತ್ಯ ಖಂಡಿಸಿದ್ದೇವೆ. ನಮಗೆ ಎಲ್ಲಕ್ಕಿಂತ ದೇಶ ಮೊದಲು ಎನ್ನುವುದನ್ನು ಸಾರಿದ್ದೇವೆ ಎಂದರು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಉಗ್ರರ ಕೃತ್ಯದಿಂದ ಹತರಾದವರು ಕುಟುಂಬದ ಸ್ಥಿತಿಯನ್ನು ಕಂಡಾಗ ಹೃದಯ ಭಾರವಾಗುತ್ತದೆ. ಉಗ್ರರ ಮನಸ್ಥಿತಿ ಏನೂ ಅನ್ನುವುದು ಈ ಕೃತ್ಯದಿಂದ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಒಗ್ಗಟ್ಟಿನ ಬದುಕನ್ನು ವಿಭಜಿಸುವ, ಈ ನೆಲದ ವಿರುದ್ಧ ಧ್ವನಿ ಎತ್ತುವ ಯಾವುದೇ ಘಟನೆಯನ್ನು ಖಂಡಿಸಬೇಕಾದದ್ದು ನಮ್ಮ ಕರ್ತವ್ಯ. ನಾವು ಜಾತಿ, ಮತ, ಧರ್ಮ ಮೀರಿ ಒಂದಾಗಿ ದೇಶದ ಪರ ಸದಾ ಇರಬೇಕು ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಭಾರತ ಪುಣ್ಯ ಭೂಮಿ. ಇಲ್ಲಿ ನಾವಿರುವುದೇ ಸೌಭಾಗ್ಯ. ಭರತ ಭೂಮಿಯ ಮೇಲಿನ ಯಾವುದೇ ದುಷ್ಕೃತ್ಯವನ್ನು ಭಾರತೀಯ ಸಹಿಸಲಾರ ಅನ್ನುವುದನ್ನು ಕಾಶ್ಮೀರ ಘಟನೆಯ ಬಳಿಕ ವ್ಯಕ್ತವಾದ ಪ್ರತಿಕ್ರಿಯೆ ಸಾಬೀತುಪಡಿಸಿದೆ. ಮುಕ್ಕೂರಿನಲ್ಲಿ ಎಲ್ಲರೂ ಒಂದುಗೂಡಿ ಉಗ್ರರ ದಾಳಿಗೆ ಅಗಲಿದ ಸಹೋದದರಿಗೆ ಶ್ರದ್ಧಾಂಜಲಿ ಸಲ್ಲಿಸುವ ಜತೆಗೇ ಘಟನೆಯನ್ನು ಖಂಡಿಸುವ ಕೆಲಸ ನಡೆದಿದೆ ಎಂದರು.
ಮೌನ ಮೆರವಣಿಗೆ
ಆರಂಭದಲ್ಲಿ ಮುಕ್ಕೂರಿನ ರಸ್ತೆಯಲ್ಲಿ ತಿಬಿಲೆಯ ದೀಪದ ಬೆಳಕಿನೊಂದಿಗೆ ಮೌನ ಮೆರವಣಿಗೆ ನಡೆಯಿತು. ಅದಾದ ಬಳಿಕ ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ಬೆಳಗಿಸಲಾಯಿತು. ಒಂದು ನಿಮಿಷದ ಕಾಲ ಉಗ್ರರ ದಾಳಿಗೆ ಪ್ರಾಣತೆತ್ತವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಕೋರಲಾಯಿತು.
ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಪ್ರಗತಿಪರ ಕೃಷಿಕರಾದ ಮೋಹನ ಬೈಪಡಿತ್ತಾಯ, ನರಸಿಂಹ ತೇಜಸ್ವಿ ಕಾನಾವು, ಗೋಪಾಲಕೃಷ್ಣ ಭಟ್ ಮನವಳಿಕೆ, ಉದ್ಯಮಿ ಚಂದ್ರಹಾಸ ರೈ ಮುಕ್ಕೂರು, ಸಂಜೀವ ಗೌಡ ಬೈಲಂಗಡಿ, ಸತ್ಯಪ್ರಸಾದ ಕಂಡಿಪ್ಪಾಡಿ, ಮಹಮ್ಮದ್ ಕೆ.ಎಚ್., ಕರುಣಾಕರ ಬೀರುಸಾಗು, ಗಿರೀಶ್ ಕಜೆ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಜ್ಯೋತಿ ಯುವಕ ಮಂಡಲ ಅಧ್ಯಕ್ಷ ದಿನೇಶ್ ಕಂರ್ಬುತ್ತೋಡಿ, ಶಾರದೋತ್ಸವ ಸಮಿತಿಯ ಲಿಂಗಪ್ಪ ಗೌಡ ಕುಂಡಡ್ಕ, ದಿವಾಕರ ಬೀರುಸಾಗು, ರೂಪಾನಂದ ಬೀರುಸಾಗು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಜಯಂತ ಕುಂಡಡ್ಕ, ರವಿ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ಯಶವಂತ ಕಾನಾವುಜಾಲು, ಪ್ರವೀಣ್ ಬೋಳಕುಮೇರು, ಮುಕ್ಕೂರು ಉಳ್ಳಾಲ್ತಿ ಭಕ್ತವೃಂದದ ತೇಜಸ್ವಿತ್ ಅಡ್ಯತಕಂಡ, ವಸಂತ ನಾಯ್ಕ, ಕಿಶನ್ ಅಡ್ಯತಕಂಡ, ಸುಳ್ಯ ಅಮರ ಸಂಘಟನ ಸಮಿತಿ ಅಧ್ಯಕ್ಷ ಕುಸುಮಾಧರ ಮುಕ್ಕೂರು, ವಿಠಲ ರೈ ಬೀರುಸಾಗು, ಚಂದ್ರಶೇಖರ ಕರ್ಪುತ್ತಾರು, ಲೋಕೇಶ್ ಬೀರುಸಾಗು, ಜಗದೀಶ್ ಬೊಮ್ಮಂತಗುಂಡಿ, ಯೂಸುಫ್ ಮುಕ್ಕೂರು, ಮೋಹನ್, ಅಹಮ್ಮದ್ ಕುಂಞಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ನಿರೂಪಿಸಿದರು.