ಉಪ್ಪಿನಂಗಡಿ: ಸುಹಾಸ್ ಶೆಟ್ಟಿ ಹತ್ಯೆಯ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ ದ.ಕ. ಜಿಲ್ಲಾ ಬಂದ್‌ಗೆ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೂ ಸಮುದಾಯದ ಕೆಲವರು ತಮ್ಮ ವ್ಯಾಪಾರ, ವಹಿವಾಟನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದರೆ, ಬೆರಳೆಣಿಕೆಯ ಕೆಲವರ ಅಂಗಡಿ- ಮುಂಗಟ್ಟುಗಳು ತೆರೆದೇ ಇತ್ತು. ಮಂಗಳೂರಿಗೆ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳ ಪ್ರಯಾಣ ರದ್ದುಗೊಂಡಿದ್ದರಿಂದ ಆ ಭಾಗಕ್ಕೆ ತೆರಳುವ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು. ಅದು ಬಿಟ್ಟರೆ ಉಳಿದ ಎಲ್ಲಾ ಕಡೆ ಬಸ್‌ಗಳ ಪ್ರಯಾಣ ಇತ್ತು.
ಬೆಳಗ್ಗೆ 11 ಗಂಟೆಯವರೆಗೆ ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಕ್ಕೆ ಖಾಸಗಿ ಬಸ್‌ಗಳು ಸಂಚರಿಸಿದ್ದವು. ಬಳಿಕ ಪ್ರಯಾಣಿಕರ ಕೊರತೆಯೂ ಕಂಡು ಬಂತು. ಆ ಬಳಿಕ ಖಾಸಗಿ ಬಸ್‌ಗಳನ್ನು ಸ್ಥಗಿತಗೊಳಿಸಲಾಯಿತು. ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಇದ್ದರೂ ಪ್ರಯಾಣಿಕರ ಕೊರತೆಯಿಂದ ಬಸ್‌ಗಳು ಬಸ್ ನಿಲ್ದಾಣದಲ್ಲೇ ಮೊಕ್ಕಂ ಹೂಡಿದವು. ಪುತ್ತೂರಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಅಬಾಧಿತವಾಗಿತ್ತು. ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುವ ಬಸ್‌ಗಳನ್ನು ಬಿ.ಸಿ.ರೋಡ್ ತನಕ ಮಾತ್ರ ಬಿಡಲಾಗುತ್ತಿತ್ತು. ಸುಬ್ರಹ್ಮಣ್ಯದ ಕಡೆ ತೆರಳುವ ಬಸ್‌ಗಳು ಕಡಬ ತನಕ ಮಾತ್ರ ಸಂಚರಿಸಿದವು. ಮಂಗಳೂರಿನಿಂದ ಯಾವುದೇ ಬಸ್‌ಗಳು ಬಾರದಿರುವುದರಿಂದ ಬೆಂಗಳೂರು ಕಡೆಗೆ ಬಸ್ ಸಂಚಾರ ಇರಲಿಲ್ಲ. ಇನ್ನುಳಿದಂತೆ ಶಿಶಿಲ, ನೆಲ್ಯಾಡಿ ಸೇರಿದಂತೆ ಇನ್ನುಳಿದ ಗ್ರಾಮೀಣ ಪ್ರದೇಶದಲ್ಲಿ ಬಸ್ ಸಂಚಾರ ಇತ್ತು. ಅಟೋ ರಿಕ್ಷಾಗಳು, ಸರ್ವೀಸ್ ಜೀಪುಗಳ ಪ್ರಯಾಣವೂ ಈ ಭಾಗದಲ್ಲಿ ಇತ್ತು. ಬೆಳಗ್ಗೆ ಹಿಂದೂ ಸಮುದಾಯ ಕೆಲವರು ಮಾತ್ರ ತಮ್ಮ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿದ್ದು, ಮಧ್ಯಾಹ್ನವಾಗುತ್ತಲೇ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಮುದಾಯದವರು ತಮ್ಮ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ತೆರಳಿದರು. ಮುಸ್ಲಿಂ ಸೇರಿದಂತೆ ಇನ್ನುಳಿದ ಸಮುದಾಯದವರ ಅಂಗಡಿ- ಮುಂಗಟ್ಟುಗಳು ಎಂದಿನಂತೆ ತೆರೆದಿತ್ತು. ಪೂರ್ವಾಹ್ನ 11ರ ಬಳಿಕ ಪೇಟೆಯಲ್ಲಿ ಜನ ಸಂದಣಿಯೂ ಎಂದಿನಂತೆ ಇರಲಿಲ್ಲ. ಈವರೆಗೆ ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.