ಪುತ್ತೂರು: ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ಮೇಲೆ ಅನುಚಿತ ವರ್ತನೆ ಮತ್ತು ಹಲ್ಲೆಗೆ ಯತ್ನಿಸಿದ ಪ್ರಕರಣವನ್ನು ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಣಿಯನ್ನು ನಿಲ್ಲಿಸಿದ್ದಾರೆ.
ಅನುಚಿತ ವರ್ತನೆ ಮತ್ತು ಹಲ್ಲೆಗೆ ಯತ್ನಿಸಿದ ಆರೋಪದ ಮೇರೆಗೆ ಸುಳ್ಯ ಪದವಿನ ಜೊಹರಾ ಮತ್ತು ಅವರ ಮಗ ಸಮದ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆಗೆ ಯತ್ನಿಸಿದ್ದ ಪ್ರಕರಣವನ್ನು ಖಂಡಿಸಿ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕೈಗೆ ಕಪ್ಪು ಪಟ್ಟಿ ಧರಿಸಿಪ್ರತಿಭಟನೆ ನಡೆಸಿದ್ದರು. ಆರೋಪಿಯ ಬಂಧನದ ತನಕ ಕಪ್ಪು ಪಟ್ಟಿ ಧರಿಸಿ ತಮ್ಮ ನೋವನ್ನು ತೋರಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. ಈ ನಡುವೆ ಆರೋಪಿಗಳ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳುವ ಪೊಲೀಸರ ಭರವಸೆಯಂತೆ ಕೆಲವು ದಿನಗಳ ಹಿಂದೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಆರೋಪಿ ಕಪ್ಪು ಪಟ್ಟಿ ಧರಣಿಯನ್ನು ಅಂತ್ಯಗೊಳಿಸಿದ್ದಾರೆ ಎಂದು ಡಾ. ದೀಪಕ್ ರೈ ತಿಳಿಸಿದ್ದಾರೆ.