ನಮಸ್ತೆ ತುಳಸೀದೇವಿ ವಿಷ್ಣುಪ್ರಿಯೆ, ಶುಭೇ ಸಂಪತ್ ಪ್ರದಾಯಿನಿ
ಸಸ್ಯಸಿರಿಯಲ್ಲಿ ಮಾನವರಿಗೆ ಜೀವನಾಡಿಯಾಗಿ , ಔಷಧಿಯ ಲೋಕವನ್ನೇ ತನ್ನಲ್ಲಿ ಮೈಗೂಡಿಸಿಕೊಂಡಿರುವ, ಮಹಿಳಾ ಪ್ರಿಯವಾಗಿ, ಎಲ್ಲರ ಮನೆಯ ಅಂಗಳದಲ್ಲಿ ಶುಭದ ಸಂಕೇತವಾಗಿ ರಾರಾಜಿಸುವ ಏಕೈಕ ಸಸ್ಯವೇ ತುಳಸಿ. ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ.

ಮನೆಯ ಅಂಗಳದಲ್ಲಿ ತುಳಸಿಯನ್ನು ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಮನೆಯಲ್ಲಿ ಸದಾಕಾಲ ಸುಖ – ಸಮೃದ್ಧಿ ನೆಲೆಸಿರುತ್ತದೆ ಎನ್ನುವ ನಂಬಿಕೆಯಿದೆ. ಹಾಗೂ ಹಿಂದೂ ಧರ್ಮದ ಹೆಚ್ಚಿನ ಪೂಜೆ ಪುನಸ್ಕಾರಗಳಲ್ಲಿ ತುಳಸಿ ದಳಗಳನ್ನು ಬಳಸಲಾಗುತ್ತದೆ. ವಿಷ್ಣುವಿನ ಪೂಜೆಯಲ್ಲಿ ತುಳಸಿಯಿಲ್ಲದೆ ಪೂಜೆಯು ಅಪೂರ್ಣವೆಂದು ಹೇಳಲಾಗುತ್ತದೆ.
ತುಳಸಿ, ಆಧ್ಯಾತ್ಮಿಕತೆಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಗೂ ಹೆಸರಾಗಿದೆ.
ತುಳಸಿ ಸಸ್ಯ ಹುಟ್ಟಿದ್ದು ಹೇಗೆ?
ಅಮೃತ ಪ್ರಾಪ್ತಿಗಾಗಿ ದೇವತೆಗಳು-ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾಕಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವ ಆನಂದ ಧನ್ವಂತರಿಯ ಕಣ್ಣುಗಳಲ್ಲಿ ಹರಿದಾಡಿತು. ಆ ಆನಂದ ಅಶ್ರುಗಳಾಗಿ ಅಮೃತ ಕಳಸದಲ್ಲಿ ಉದುರಿದವು. ಆಗಲೇ ತುಳಸಿ ಸಸ್ಯ ಹುಟ್ಟಿತು ಎಂದು ಪುರಾಣದ ಹಿನ್ನೆಲೆ ಇದೆ.
ತುಳಸಿ ಪದದ ಅರ್ಥ?
ತುಳಸಿ ಎಂಬ ಪದದಲ್ಲಿ ‘ತ್-ಉ-ಲಸೀ’ ಎಂಬ ಮೂರು ಅಕ್ಷರಗಳಿವೆ. ‘ತ್’ ಎಂದರೆ ಮರಣವೆಂದರ್ಥ. ‘ಉ’ ಎಂದರೆ ಸಂಬಂಧ ಉಳ್ಳವರು. ಒಟ್ಟಾರೆ ‘ತು’ ಎಂದರೆ ಮೃತರಾದವರು ಎಂದರ್ಥ. ಮೃತರಾದವರು ಲಸತಿ ಶೋಭಿಸುತ್ತಾರೆ. ಅರ್ಥಾತ್ ‘ಯಾವ ವ್ಯಕ್ತಿ ತುಳಸಿಯ ಸ್ಮರಣಾದಿಗಳನ್ನು ಮಾಡಿ ಮೃತರಾಗಿರುತ್ತಾರೋ ಅವರು ಸ್ವರ್ಗಾದಿಲೋಕದಲ್ಲಿ ಶೋಭಾಯಮಾನರಾಗಿ ಇರುತ್ತಾರೆ’ ಎಂಬ ಅರ್ಥವಿದೆ.
ತುಳಸಿಗಿರುವ ನಾನಾ ಹೆಸರುಗಳು:
ವೈಷ್ಣವಿ, ವಿಷ್ಣುವಲ್ಲಭ, ಹರಿಪ್ರಿಯ, ವಿಷ್ಣುತುಳಸಿ, ರಾಮ ತುಳಸಿ, ಶ್ಯಾಮ ತುಳಸಿ, ಕೃಷ್ಣ ತುಳಸಿ ಹೀಗೆ ನಾನಾ ಹೆಸರುಗಳು ತುಳಸಿ ಸಸ್ಯಕ್ಕಿದೆ.
ರೋಗನಿರೋಧಕಿ ತುಳಸಿ ದೇವತೆ
ಆಯುರ್ವೇದದಲ್ಲಿಯೂ ಪ್ರಧಾನವಾದ ಸ್ಥಾನ ತುಳಸಿಗೆ ಇದೆ. ಅಜೀರ್ಣ, ಅತಿಸಾರ, ಹೃದಯರೋಗ, ಅಪಸ್ಮಾರ, ಜ್ವರ, ಕೆಮ್ಮು, ಶೀತ, ತಲೆನೋವು, ಕಿಡ್ನಿಸ್ಟೋನ್, ರಾಮಬಾಣವಾಗಿ ತುಳಸಿ ಕಾರ್ಯ ನಿರ್ವಹಿಸುತ್ತಾಳೆ.