ಕೌಕ್ರಾಡಿ: ಗ್ರಾ.ಪಂ.ಅಧ್ಯಕ್ಷರಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ನೆಲ್ಯಾಡಿ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಬ್ಬರು ವಿದ್ಯಾರ್ಥಿಗಳನ್ನು ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಅವರು ಮೇ.8ರಂದು ಸನ್ಮಾನಿಸಿ ಗೌರವಿಸಿದರು.


ಮಂಗಳೂರು ಗುರುಪುರ ಡಾ| ಬಿ.ಆರ್.ಅಂಬೇಡ್ಕರ್ ರೆಸಿಡೆನ್ಸಿ ಸ್ಕೂಲ್‌ನ ವಿದ್ಯಾರ್ಥಿನಿ, ಇಚ್ಲಂಪಾಡಿ ಗ್ರಾಮದ ಕುಡಾಲ ನಿವಾಸಿ ಕೆ.ಜಿನ್ನಪ್ಪ ಗೌಡ ಹಾಗೂ ದೇವಕಿ ದಂಪತಿ ಪುತ್ರಿ ಕೆ.ನಿರೀಕ್ಷಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 615 ಅಂಕ ಪಡೆದುಕೊಂಡಿದ್ದು ಇವರ ಸಾಧನೆಯನ್ನು ಗುರುತಿಸಿ ಕೌಕ್ರಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಅವರು, ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ರಲ್ಲಿ 615 ಅಂಕ ಪಡೆಯುವ ಮೂಲಕ ಕೆ.ನಿರೀಕ್ಷಾ ಅವರು ಗ್ರಾಮಕ್ಕೆ ಕೀರ್ತಿ ತಂದಿರುವ ಹೆಮ್ಮೆಯ ವಿದ್ಯಾರ್ಥಿನಿ. ಇವರ ಸಾಧನೆ ಇತರೇ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕೆಂಬ ನಿಟ್ಟಿನಲ್ಲಿ ಗೌರವಿಸುತ್ತಿದ್ದೇವೆ. ಅವರ ಮುಂದಿನ ವಿದ್ಯಾಭ್ಯಾಸ ಜೀವನವೂ ಉತ್ತುಂಗಕ್ಕೆ ಏರಲಿ. ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದರು. ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ಅವರು ಮಾತನಾಡಿ, ಹಳ್ಳಿ ಪ್ರದೇಶವಾಗಿರುವ ಇಚ್ಲಂಪಾಡಿಯ ವಿದ್ಯಾರ್ಥಿನಿಯೋರ್ವರು ಜನ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಗ್ರಾ.ಪಂ.ಅಧ್ಯಕ್ಷರೇ ಮುತುವರ್ಜಿ ವಹಿಸಿಕೊಂಡು ಅವರನ್ನು ಗ್ರಾ.ಪಂ.ಗೆ ಕರೆಸಿ ಸನ್ಮಾನಿಸಿದ್ದಾರೆ. ವಿದ್ಯಾರ್ಥಿನಿಯ ಮುಂದಿನ ಭವಿಷ್ಯವೂ ಉಜ್ವಲವಾಗಲಿ ಎಂದರು. ಪಿಡಿಒ ದೇವಿಕಾ, ಗ್ರಾ.ಪಂ.ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಸವಿತಾ, ಭವಾನಿ ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿ ವಿದ್ಯಾ ಸನ್ಮಾನ ಪತ್ರ ವಾಚಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

ಧನ್ವಿ ಶೆಟ್ಟಿಗೆ ಸನ್ಮಾನ:
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 613 ಅಂಕ ಪಡೆದುಕೊಂಡ ದೋಂತಿಲ ನಿವಾಸಿ ಬಾಲಕೃಷ್ಣ ಶೆಟ್ಟಿ ಹಾಗೂ ರಮ್ಯ ದಂಪತಿ ಪುತ್ರಿ, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಧನ್ವಿ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಗ್ರಾ.ಪಂ.ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಹೇಮಂತ್ ಕಾಂತುಪಳಿಕೆ, ಬಿಜೆಪಿ ದೋಂತಿಲ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ಕಾಂತುಪಳಿಕೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here