
ಪುತ್ತೂರು: ಅದೇನೇ ಮಾಡಿದರು ಈ ಒಂಟಿ ಸಲಗ ಮಾತ್ರ ಕೆಯ್ಯೂರನ್ನು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಕಳೆದೆರಡು ದಿನಗಳ ಹಿಂದೆ ಕೆಯ್ಯೂರು ಗ್ರಾಮದ ಅಂಬುಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಅಲ್ಲಿ ಕೆಲವು ಕೃಷಿ ತೋಟಗಳಲ್ಲಿ ಹಾನಿಯುಂಟು ಮಾಡಿತ್ತು. ಇದೀಗ ಮೇ.22 ರಂದು ರಾತ್ರಿ ವೇಳೆ ಗ್ರಾಮದ ಅರ್ತ್ಯಡ್ಕ ಪ್ರದೇಶದಲ್ಲಿ ಆನೆ ಕಾಣಿಸಿಕೊಂಡಿದ್ದು ಅರ್ತ್ಯಡ್ಕದ ಪ್ರಸನ್ನ ಭಟ್ ಎಂಬವರ ತೋಟದಲ್ಲಿ ಕೃಷಿ ಹಾನಿಯುಂಟು ಮಾಡಿದೆ.
ತೋಟಕ್ಕೆ ದಾಳಿ ನಡೆಸಿದ ಒಂಟಿ ಸಲಗ ಅಲ್ಲಿದ್ದ ಬಾಳೆಗಿಡ ಸೇರಿದಂತೆ ಹಲವು ಅಡಿಕೆ ಮರಗಳನ್ನು ದೂಡಿ ಹಾಕಿದೆ. ಇದಲ್ಲದೆ ದೊಡ್ಡದಾದ ತೆಂಗಿನ ಮರವೊಂದನ್ನು ಕೂಡ ಕೆಡವಿ ಹಾಕಿರುವ ಬಗ್ಗೆ ವರದಿಯಾಗಿದೆ. ಕೃಷಿ ಹಾನಿ ಮಾಡಿದ ಆನೆಯು ಅಲ್ಲಿಂದ ಮುಂದಕ್ಕೆ ಪೆರ್ಲಂಪಾಡಿ ಭಾಗಕ್ಕೆ ಹೆಜ್ಜೆ ಹಾಕಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅರಣ್ಯ ಇಲಾಖೆಯ ಸತ್ಯನ್, ಪಂಚಾಯತ್ ಸಿಬ್ಬಂದಿ ಧರ್ಮಣ್ಣರವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೆಗುಂಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ವ್ಯರ್ಥವಾಯಿತೇ…?!
ಎ.29 ರಂದು ಕೊಳ್ತಿಗೆ ಗ್ರಾಮದ ಅರ್ತ್ಯಡ್ಕದ ಕೆಎಫ್‌ಡಿಸಿ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆಯೋರ್ವರ ಸಾವಿಗೆ ಕಾರಣವಾಗಿದ್ದ ಈ ಒಂಟಿ ಸಲಗವು ಇದೀಗ ಮತ್ತೆ ಅದೇ ರಬ್ಬರ್ ತೋಟದಿಂದ ಹಾದು ಹೋಗಿದೆ ಎಂದು ಹೇಳಲಾಗಿದೆ. ಮಹಿಳೆಯ ಸಾವಿಗೆ ಕಾರಣವಾದ ಬಳಿಕ ಆನೆಯನ್ನು ಕೊಳ್ತಿಗೆ ಗ್ರಾಮದ ಆನೆಗುಂಡಿ ಪ್ರದೇಶಕ್ಕೆ ಹಿಮ್ಮೆಟ್ಟಿಸುವ ಸಲುವಾಗಿ ಚಿಕ್ಕಮಗಳೂರಿನಿಂದ ಇಟಿಎಫ್(ಎಲಿಫೆಂಟ್ ಟಾಸ್ಕ್‌ಫೋರ್ಸ್) ತಂಡ ಕೊಳ್ತಿಗೆ ಗ್ರಾಮಕ್ಕೆ ಬಂದಿತ್ತು. ಕೆಲವು ದಿನಗಳ ಕಾರ್ಯಾಚರಣೆ ಬಳಿಕ ಕಾಡಾನೆ ಆನೆಗುಂಡಿ ಪ್ರದೇಶಕ್ಕೆ ಮರಳಿದೆ ಎಂಬುದು ಖಾತ್ರಿಯಾದ ಬಳಿಕ ತಂಡ ಮರಳಿತ್ತು. ಇಟಿಎಫ್ ತಂಡ ಮರಳಿದ ವಾರದೊಳಗೆ ಆನೆಯು ಆನೆಗುಂಡಿಯಿಂದ ಕೆಯ್ಯೂರಿಗೆ ಬಂದಿದೆ. ಇದೊಂದು ಅಲೆಮಾರಿ ಆನೆಯಾಗಿದ್ದು ಆನೆಗುಂಡಿಯಿಂದ ಕೆಯ್ಯೂರಿಗೆ ಕೆಯ್ಯೂರಿನಿಂದ ಆನೆಗುಂಡಿಗೆ ಹೆಜ್ಜೆ ಹಾಕುತ್ತಲೆ ಇದೆ ಎಂಬುದೇ ದುರಂತ. ಈ ಪುಂಡಾನೆಯನ್ನು ಪರ್ಮನೆಂಟಾಗಿ ಒಂದು ಭಾಗಕ್ಕೆ ಕಳುಹಿಸಿಕೊಡಬೇಕಾದ ಕೆಲಸ ಆಗಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.