ವಿಟ್ಲ: ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಿ.ಸಿ.ರೋಡಿನಲ್ಲಿ ಮುಂಜಾನೆ ವೇಳೆ ನಡೆದಿದೆ.

ಮಂಚಿ ಕೊಳ್ನಾಡು ನೂಜಿ ನಿವಾಸಿ ಜಯರಾಮ್ (57 ವ.) ಮೃತ ದುರ್ದೈವಿ.ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಜಯರಾಮ್ ಅವರು ಬೆಳಿಗ್ಗೆ 4.30ರ ಸುಮಾರಿಗೆ ಮನೆಯಿಂದ ಮಂಗಳೂರಿಗೆ ಮಾರುತಿ 800 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ವಿಪರೀತ ಮಳೆ ಸುರಿಯುತ್ತಿದ್ದ ಹಿನ್ನೆಲೆ ಅವರು ಸಂಚರಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಬಿಸಿರೋಡಿನ ಡಿ.ಪಿ.ಸ್ಟೋರ್ ನ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಕೆಲಹೊತ್ತು ಸೀಟಿನಲ್ಲಿ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ರವರ ನೇತೃತ್ವದ ಪೊಲೀಸರ ತಂಡ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.