ಪುತ್ತೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಕೃಷಿವಿಮೆ ಕಂಪನಿಯನ್ನು ನಿಗದಿಪಡಿಸ ಲಾಗಿದೆ. ಭತ್ತ ಬೆಳೆಯುವ ರೈತರು ಈ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದ್ದು, ಮುಂಗಾರು ಹಂಗಾಮಿನಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ/ಹವಾಮಾನ ವೈಪರೀತ್ಯದಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರ ಭಾಗವನ್ನು ನೀಡಲಾಗುವುದು.
ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ನೀಡಲಾಗುವುದು. ಕಟಾವಿನನಂತರ ಒಣಗಿಸಲು ಬಿಟ್ಟ ಸಂದರ್ಭ ದಲ್ಲಿ 2 ವಾರದೊಳಗೆ ಅಕಾಲಿಕ ಮಳೆ/ಚಂಡಮಾರುತ ಸಹಿತ ಮಳೆಯಿಂದಾಗಿ ನಷ್ಟವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧರಿಸಿ ಪರಿಹಾರ ವನ್ನು ನೀಡುತ್ತದೆ. ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಭೂಕುಸಿತ, ಬೆಳೆಮುಳುಗಡೆ, ಆಲಿಕಲ್ಲು ಮಳೆಯಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕಕ್ಷೇತ್ರವಾರು ನಿರ್ಧರಿಸಿ ರೈತರಿಗೆಬೆಳೆವಿಮಾ ಪರಿಹಾರ ನೀಡಲಾಗುವುದು.
2025ನೇ ಸಾಲಿನ ಮುಂಗಾರಿಗೆ ಭತ್ತದ ಬೆಳೆಗೆ ನೋಂದಾಯಿಸಲು ಆ.16 ಕಡೇದಿನ. ಪ್ರತಿ ಎಕ್ರೆಗೆ ವಿಮಾ ಮೊತ್ತ 25,800 ರೂ. ಆಗಿದ್ದು, ಕಂತು ಒಂದು ಎಕ್ರೆಗೆ 516 ರೂ. ಇರಲಿದೆ. ಅರ್ಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆಯಲು ಇಲಾಖೆಯ ಪ್ರಕಟಣೆ ತಿಳಿಸಿದೆ.