ಸಂತ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಕಾರ್ಯಗಾರ

0

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲ ರಕ್ಷಣಾ ಘಟಕದ ಆಶ್ರಯದಲ್ಲಿ  ಕಾಲೇಜಿನ ವಿದ್ಯಾರ್ಥಿಗಳಿಗೆ ‘ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ಕಾರ್ಯಗಾರವು  ಜೂನ್ 30ರಂದು ಕಾಲೇಜು  ಸಭಾಂಗಣದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜಿನ ಮನೋವೈದ್ಯರು ಹಾಗೂ ಮನೋವೈದ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜೇಶ್ ಎಂ ಮಾತನಾಡಿ,
ಇಂದಿನ ಹದಿಹರೆಯದ ಸಮಸ್ಯೆಗಳ ಮೂಲ ಮೊಬೈಲ್ ಫೋನುಗಳಾಗಿದ್ದು, ಮಕ್ಕಳಿಗೆ ಮೊಬೈಲ್ ಮೇಲಿನ ಅತಿಯಾದ ದುರಾಸಕ್ತಿ ಅಥವಾ ಚಟ ಈ ಎಲ್ಲಾ ತೊಂದರೆಗಳ ಮೂಲವಾಗಿದೆ. ಸಣ್ಣ ಸಣ್ಣ ಮಕ್ಕಳು ಕೂಡ ಮೊಬೈಲ್ ಕಡೆಗೆ ಆಕರ್ಷಿತರಾಗಿ ತಮ್ಮ ಹದಿಹರೆಯದ ಅತ್ಯಂತ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಟಿವಿ, ಮೊಬೈಲುಗಳಿಂದ ದೂರ ಇಡಲು ಇತರ ವಿಷಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ನಮ್ಮ ಜೀವನಕ್ಕೆ ಪೂರಕವಾಗಿ ಉಪಯೋಗಿಸಲು ನಾವು ಕಲಿಯಬೇಕಾಗಿದೆ. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಹದಿಹರೆಯದಲ್ಲಿ ಸಾಮಾನ್ಯವಾಗಿ ಬರುವ ಖಿನ್ನತೆಯಿಂದ ಹೊರಬರಬಹುದು.  ಈ ಮೂಲಕ ಮಾನಸಿಕವಾಗಿ ಸದೃಢವಾದ ಸಮಾಜವನ್ನು ಕಟ್ಟಬಹುದು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಬಾಲ್ಯವಸ್ಥೆಯಿಂದ ಮನುಷ್ಯನ ಬೆಳವಣಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಗಬೇಕಾಗಿದ್ದು, ಹಲವಾರು ಕಾರಣಗಳು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆಗಳು ಆಗುತ್ತಿದ್ದು, ಸೂಕ್ತ ವೈದ್ಯರ ಮೂಲಕ ಇವುಗಳನ್ನು ಸರಿಪಡಿಸಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ಆಪ್ತ ಸಮಾಲೋಚನೆ ಭವಿಷ್ಯದ ಹಲವಾರು ತೊಂದರೆಗಳನ್ನು ನಿವಾರಿಸಬಹುದು ಎಂದು ಹೇಳಿದರು.


ವೇದಿಕೆಯಲ್ಲಿ ಬಾಲ ರಕ್ಷಣಾ ಘಟಕದ ನಿರ್ದೇಶಕರಾದ ಡಾ. ಆಶಾ ಸಾವಿತ್ರಿ ಹಾಗೂ ರಾಮ್ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಅಜಯ್ ನಾಯಕ್ ಸ್ವಾಗತಿಸಿ, ಡ್ಯೋರಾ ಐನಿಶ್ ರೆಬೆಲ್ಲೋ ವಂದಿಸಿ, ಪ್ರಾಧಿ ಕ್ಲಾರೆ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here