ಪುತ್ತೂರು:ಹಿಂದೂ ಯುವಕನಿಂದಲೇ ಹಿಂದೂ ಯುವತಿಗೆ ಅನ್ಯಾಯವಾಗಿದ್ದರೂ ಒಬ್ಬರೂ ಹಿಂದು ಮುಖಂಡರು,ಸಂಘಟನೆಯವರು ಮಾತನಾಡುತ್ತಿಲ್ಲ.ಒಂದು ವೇಳೆ ಆರೋಪಿಯ ಸ್ಥಾನದಲ್ಲಿ ಬೇರೆ ಧರ್ಮದ ಯುವಕ ಇರುತ್ತಿದ್ದರೆ ಇಡೀ ಪುತ್ತೂರಿಗೆ ಬೆಂಕಿ ಹಾಕುತ್ತಿದ್ದರು.ಪ್ರಾಣಿಗಳಿಗೆ ಅನ್ಯಾಯವಾದಾಗ ಪ್ರಾಣಿ ದಯಾಸಂಘವಿದೆ.ಆದರೆ ಮನುಷ್ಯನಿಗೆ ಅನ್ಯಾಯವಾದಾಗ ಯಾರೂ ಇಲ್ಲ ಯಾಕೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
- ಬಿಜೆಪಿಯ ಮುಖಂಡರು ಮತ್ತು ನಗರಸಭೆಯ ಬಿಜೆಪಿ ಸದಸ್ಯರೂ ಆದ ಪಿ.ಜಿ. ಜಗನ್ನಿವಾಸ ರಾವ್ ಅವರ ಮನೆಯಲ್ಲೇ ಹುಡುಗಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಖುದ್ದು ಸಂತ್ರಸ್ತೆ ದಿನಾಂಕ ಸಹಿತವಾಗಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಎಫ್ಐಆರ್ ಕೂಡಾ ಆಗಿದೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖಂಡನ ಮಗನೇ ಆರೋಪಿಯಾಗಿದ್ದಾನೆ.ಅನ್ಯಾಯಕ್ಕೆ ಒಳಗಾದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದಾಳೆ.ಆರಂಭದಲ್ಲಿ ಮದುವೆಗೆ ಒಪ್ಪಿಕೊಂಡ ಆರೋಪಿ ಈಗ ಮದುವೆಯಾಗದೆ ತಲೆ ಮರೆಸಿಕೊಂಡಿದ್ದಾನೆ.ಈ ಪ್ರಕರಣದಲ್ಲಿ ಯುವಕ ಹೇಗೆ ತಪ್ಪಿತಸ್ಥನೋ ಆತನ ತಂದೆ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಸಮಾಜಕ್ಕೆ ಉತ್ತರ ನೀಡಬೇಕಾಗಿದೆ ಎಂದ ಆಲಿಯವರು,ಹುಡುಗ ನಿಜವಾಗಿ ಲವ್ ಮಾಡುತ್ತಿದ್ದರೆ ಮದುವೆ ಆಗುತ್ತಿದ್ದ.ಅದರೆ ಇದು ವಶೀಕರಣ ಮಾಡಿ ಅತ್ಯಾಚಾರ ಕೃತ್ಯ ಎಂದು ಆರೋಪಿಸಿದರು.
- ಹೆಣ್ಣಿನ ಶಾಪ ಸಿಕ್ಕಿಯೇ ಸಿಗುತ್ತದೆ:
ಯುವತಿ ಗರ್ಭವತಿ ಎಂದು ಗೊತ್ತಾದ ಬಳಿಕ ಪುತ್ತೂರಿನ ಪ್ರಮುಖರೆಲ್ಲ ಸೇರಿ ರಾಜಿ ಪಂಚಾತಿಕೆ ಮಾಡಿಸಿದ್ದಾರೆಂದು ಗೊತ್ತಾಗಿದೆ.ಮದುವೆಯಾಗಲು ಯುವಕನ ಕಡೆಯವರು ಒಪ್ಪಿದ್ದರು ಎಂದು ವರದಿಯಾಗಿತ್ತು.ಆದರೆ ಅಂತಿಮವಾಗಿ ಯುವಕ ಕೈಕೊಟ್ಟು ಪರಾರಿಯಾಗಿದ್ದಾನೆ.ಸಂಧಾನ ಮಾಡಿಸಿದವರು ಬಳಿಕ ಯಾಕೆ ಸುಮ್ಮನಾಗಿದ್ದಾರೆ? ಮಹಿಳಾ ಠಾಣೆಯಲ್ಲಿ ಕುಳಿತು ಕ್ರಿಮಿನಲ್ ಪ್ರಕರಣವೊಂದರ ವಿಚಾರದಲ್ಲಿ ಸಂಧಾನ ಮಾಡಿಸಿದ್ದು ಎಷ್ಟು ಸರಿ? ಪೊಲೀಸ್ ಠಾಣೆ ಪಂಚಾಯಿತಿ ಕಟ್ಟೆಯೇ? ಸಂಧಾನ ಮಾಡಿಸಿದವರು ಮದುವೆ ಮಾಡಿಸಿದ್ದರೆ ಅರ್ಥವಿತ್ತು. ಈಗ ಯುವಕ ಪರಾರಿಯಾಗಲು ಈ ಸಂಧಾನಕಾರರೇ ಕಾರಣರಾಗಿಲ್ಲವೇ ಎಂದು ಪ್ರಶ್ನಿಸಿದ ಆಲಿ, ರಾಜಿ ಪಂಚಾತಿಕೆ ಮಾಡಿದವರಿಗೆ ಹೆಣ್ಣಿನ ಶಾಪ ಸಿಕ್ಕಿಯೇ ಸಿಗುತ್ತದೆ ಎಂದು ಹೇಳಿದರು.
- ಹಿಂದು ಮುಖಂಡರು ಎಲ್ಲಿದ್ದಾರೆ ?:
ಇವತ್ತು ಅನ್ಯಕೋಮಿನ ಯುವಕನ ಪ್ರಕರಣ ಆಗುತ್ತಿದ್ದರೆ ಇಡೀ ಊರಲ್ಲೇ ಪ್ರತಿಭಟನೆ ನಡೆಯುತ್ತಿತ್ತು.ಡಾ.ಆಶಾ ಪುತ್ತೂರಾಯ ಅವರ ವಿಚಾರದಲ್ಲಿ ಪ್ರತಿಭಟನೆ ಮಾಡಿದ ಅರುಣ್ ಕುಮಾರ್ ಪುತ್ತಿಲ, ಮುರಳಿ ಹಸಂತಡ್ಕ ಇವತ್ತು ಎಲ್ಲಿ ಅಡಗಿ ಕೂತಿದ್ದಾರೆ.ಪಿ.ಜಿ.ಜಗನ್ನಿವಾಸ ರಾವ್ ಅವರು 50 ಪರ್ಸೆಂಟ್ ಬಿಜೆಪಿ, 50 ಪರ್ಸೆಟ್ ಪುತ್ತಿಲ ಆಗಿರುವಾಗ ಅರುಣ್ ಕುಮಾರ್ ಪುತ್ತಿಲ ಯಾಕೆ ಮಾತನಾಡುತ್ತಿಲ್ಲ?.ಕಾಂಗ್ರೆಸ್ ಜನಪ್ರತಿನಿಽಗಳು ಏನಾದರೂ ಮಾಡುತ್ತಿದ್ದರೆ ಇವತ್ತು ಬೆಂಕಿ ಹಾಕುತ್ತಿದ್ದರು.ಇವತ್ತು ಹಿಂದು ಯುವತಿಗೆ ಅನ್ಯಾಯವಾದಾಗ ಬಿಜೆಪಿಯ ಮಹಿಳಾ ಮೋರ್ಚಾ, ದುರ್ಗಾವಾಹಿನಿ, ಸಂಘ ಪರಿವಾರದ ಆರ್‌ಎಸ್‌ಎಸ್ ಸಹಿತ ಹಲವಾರು ಸಂಘಟನೆಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದ ಆಲಿಯವರು, ಇವತ್ತು ಕಾಂಗ್ರೆಸ್‌ನವರು ಏನಾದರೂ ಇದೇ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದರೆ ಅವರ ಅಪ್ಪ,ಅಮ್ಮ,ಅಜ್ಜ,ಕುಟುಂಬದ ಹೆಸರು, ಅವರ ಪೋಸ್ಟ್ ಮಾಧ್ಯಮದಲ್ಲಿ ಬರುತ್ತಿತ್ತು.ಬಿಜೆಪಿ ಸಂಘ ಪರಿವಾರ ರಾಜಕೀಯ ಲಾಭಕ್ಕಾಗಿ ಮಾತ್ರ ಇರುವುದು.ಹೆಣ್ಣನ್ನು ಮಾತೆ ಎನ್ನುವವರ, ಸಂಸ್ಕಾರ-ಸಂಸ್ಕೃತಿ ಎನ್ನುವವರ ವಲಯದಲ್ಲೇ ಒಬ್ಬಳು ಹೆಣ್ಣಿಗೆ ಘೋರ ಅನ್ಯಾಯ ಆಗಿದೆ.ಬೇಟಿ ಬಚಾವೋ ಎನ್ನುವವರು ಏನು ಹೇಳುತ್ತಾರೆ? ಎಂದು ಹೆಚ್.ಮಹಮ್ಮದ್ ಅಲಿ ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ, ಮಾಜಿ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಕಾರ್ಯದರ್ಶಿ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.