ಆರ್ಲಪದವು: ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನಜಾಗೃತಿ ಸಭೆ

0

ಪಂಚ ಗ್ಯಾರಂಟಿ ವಿರುದ್ದ ಮಾತನಾಡುವ ಶೋಭಾ ಕರಂದ್ಲಾಜೆ ಚಾರ್ವಾಕ ಗ್ರಾಮಕ್ಕೆ ಏನು ಕೊಟ್ಟಿದ್ದಾರೆ: ಮಮತಾ ಗಟ್ಟಿ

ಪುತ್ತೂರು: ಕರ್ನಾಟಕ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಯಿಂದಾಗಿ ಸರಕಾರದ ಬೊಕ್ಕದಕ್ಕೆ ನಷ್ಟವಾಗುತ್ತಿದೆ, ಪಂಚ ಗ್ಯಾರಂಟಿಯನ್ನು ನಿಲ್ಲಿಸಬೇಕು, ಇದರಿಂದಾಗಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಎಂದು ಹೇಳುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಅವರ ಸ್ವಂತ ಗ್ರಾಮ ಚಾರ್ವಾಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾಗಟ್ಟಿ ಸವಾಲು ಹಾಕಿದರು.


ಪಾಣಾಜೆ ಗ್ರಾಮದ ಆರ್ಲಪದವು ವಿನಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಂಚ ಗ್ಯಾರಂಟಿಯಿಂದ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುವ ಶೋಭಾ ಕರಂದ್ಲಾಜೆಯವರು ಕರ್ನಾಟಕದಲ್ಲಿ ಸಚಿವರಾಗಿದ್ದವರು, ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಇಷ್ಟು ವರ್ಷದ ರಾಜಕೀಯದಲ್ಲಿ ಅವರ ತವರು ಗ್ರಾಮಕ್ಕೆ ಏನು ಕೊಡುಗೆ ನೀಡಿಲ್ಲ, ಬರೇ ಭಾಷಣ ಮಾಡಿ ಹೋಗಿದ್ದು ಮಾತ್ರ ಇವರಿಗೆ ಪಂಚ ಗ್ಯಾರಂಟಿ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರು ಸ್ವಾಭಿಮಾನದಿಂದ ಬದುಕು ನಡೆಸುವಂತಾಗಿದೆ. ಬಡವರ ಹೊಟ್ಟೆ ತುಂಬಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರಕಾರದ ಬೆಲೆ ಏರಿಕೆ ನೀತಿಯಿಂದ ಇಂದು ಬಡವರು, ಮಧ್ಯಮ ವರ್ಗದ ಕುಟುಂಬಗಳು ನಿತ್ಯ ವಸ್ತುಗಳನ್ನು ಕೊಂಡುಕೊಳ್ಳದಂತ ಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಮಾಡಿದವರು ಬಿಜೆಪಿ ಸರಕಾರ ಅದನ್ನು ಕಡಿಮೆ ಮಾಡಲು ಬಿಜೆಪಿಯವರು ಪ್ರತಿಭಟನೆ ಮಾಡಬೇಕು ಎಂದು ಹೇಳಿದರು. ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ, ಕರ್ನಾಟಕದಲ್ಲಿ ಶೇ. 95 ಕುಟುಂಬಗಳು ಪಂಚ ಗ್ಯಾರಂಟಿ ಪ್ರಯೋಜನ ಪಡೆಯುತ್ತಿರುವುದು ಕಾಂಗ್ರೆಸ್‌ಗೆ ಸಂತೋಷವನ್ನು ತಂದಿದೆ. ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಯಾವುದೇ ಯೋಜನೆಗಳನ್ನು ತಂದಿಲ್ಲ. ಎಲ್ಲದಕ್ಕೂ ಜಿಎಸ್‌ಟಿ ತೆರಿಗೆ ಹಾಕುವ ಮೂಲಕ ಬಡವರ ಕತ್ತು ಹಿಸುಕುವ ಕೆಲಸ ಮಾಡಿದೆ ಎಂದು ಹೇಳಿದರು.

ಗ್ಯಾರಂಟಿ ಬೇಡದವರು ಬಿಟ್ಟುಬಿಡಬಹುದು: ಉಮಾನಾಥ ಶೆಟ್ಟಿ
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ, ಇದರಿಂದ ಅಭಿವೃದ್ದಿ ಕುಂಠಿತವಾಗಿದೆ ಎಂದು ಹೇಳುತ್ತಿರುವ ಬಿಜೆಪಿಯವರು ಬೇಡವಾದರೆ ಗ್ಯಾರಂಟಿ ಯೋಜನೆಯನ್ನು ಬಿಟ್ಟು ಬಿಡಬಹುದು ಅಥವಾ ಕಾಂಗ್ರೆಸ್ ಸರಕಾರದ ಈ ಯೋಜನೆಯು ನಮಗೆ ಬೇಡ ಎಂದು ಅರ್ಜಿ ಹಾಕಬಹುದು ಎಂದು ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಹೇಳಿದರು.


ಪುತ್ತೂರು ತಾಲೂಕಿನಲ್ಲಿ ಪಂಚ ಗ್ಯಾರಂಟಿಯಿಂದ ಪ್ರಯೋಜನ ಪಡೆದಿರುವ ಒಟ್ಟು ಕುಟುಂಬಗಳು ಮತ್ತು ಅವರಿಗೆ ಇದುವರೆಗೆ ಬಂದಿರುವ ಮೊತ್ತವನ್ನು ಸಭೆಯಲ್ಲಿ ವಿವರಿಸಿ ಮಾತನಾಡಿದ ಅವರು ಈ ಲೆಕ್ಕದಲ್ಲಿ ಬಿಜೆಪಿಯವರೂ ಇದ್ದಾರೆ, ಬಿಜೆಪಿ ನಾಯಕರ ಕುಟುಂಬಸ್ಥರೂ ಇದ್ದಾರೆ , ಕಾಂಗ್ರೆಸ್ ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಈ ಯೋಜನೆಯನ್ನು ನೀಡಿದೆ ಎಂದು ಹೇಳಿದರು. ನಾವು ಕಟ್ಟಿದ ತೆರಿಗೆ ಹಣವನ್ನು ಸರಕಾರ ನಮಗೆ ಪಂಚ ಗ್ಯಾರಂಟಿ ಮೂಲಕ ನೀಡುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗಲೂ ಜನರು ತೆರಿಗೆ ಕಟ್ಟುತ್ತಿದ್ದರು. ಆಗ ಯಾಕೆ ಬಿಜೆಪಿಯವರು ಈ ಗ್ಯಾರಂಟಿ ಯೋಜನೆಯನ್ನು ಜನತೆಗೆ ನೀಡಿಲ್ಲ? ಎಂದು ಪ್ರಶ್ನಿಸಿದರು. ಸುಳ್ಳು ಹೇಳಿ ಜನರನ್ನು ಮೋಸ ಮಾಡಬಹುದು ಎಂದು ಬಿಜೆಪಿ ಗ್ರಹಿಸಿದ್ದರೆ ಅದು ಸಾಧ್ಯವಿಲ್ಲ, ಆಧುನಿಕ ಯುಗದಲ್ಲಿ ಎಲ್ಲವನ್ನೂ ಜನ ಬಲ್ಲವರಾಗಿದ್ದಾರೆ ಎಂದು ಹೇಳಿದರು.


ಕಳೆದ ಕೆಲದಿನಗಳ ಹಿಂದೆ ಬಿಜೆಪಿಯವರು ಪುತ್ತೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಹಿಳೆಯರು ಉಚಿತ ಬಸ್ಸಿನಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ಮುಗಿದ ಬಳಿಕ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಪುನಃ ಉಚಿತ ಬಸ್ಸಿನಲ್ಲೇ ಪ್ರಯಣ ಮಾಡಿದ್ದಾರೆ. ಸರಕಾರದಿಂದ ದೊರೆಯುವ ಸವಲತ್ತುಗಳು ಬಿಜೆಪಿಗೆ ಬೇಕು, ಸವಲತ್ತನ್ನು ಪಡೆದುಕೊಂಡು ಬಳಿಕ ಸರಕಾರವನ್ನು ದೂಷಣೆ ಮಾಡುತ್ತಾರೆ, ಬಿಜೆಪಿ ನಾಯಕರು ಕರೆದ ಸುಳ್ಳುಗಳನ್ನು ಬಿತ್ತರಿಸುತ್ತಾರೆ ಇದು ದೇವರು ಮೆಚ್ಚುವ ಕೆಲಸವಲ್ಲ, ಇದನ್ನು ಭೂಮಿ ತಾಯಿಯೂ ಕ್ಷಮಿಸಲ್ಲ.
ಕೃಷ್ಣಪ್ರಸಾದ್ ಆಳ್ವ,
ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪುತ್ತೂರು


ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಲಾರೆನ್ಸ್ ಡಿಸೋಜಾ, ಉಸ್ತುವಾರಿ ಶಂಕರನಾರಾಯಣ ಭಟ್, ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ, ಗ್ಯಾರಂಟಿ ಸಮಿತಿಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸೇವಾದಳದ ಅಧ್ಯಕ್ಷರಾದ ವಿಶ್ವಜಿತ್ ಅಮ್ಮುಂಜೆ, ಬ್ಲಾಕ್ ಮುಖಂಡರಾದ ಶರೂನ್ ಸಿಕ್ವೆರಾ, ಪೂಣೇಶ್ ಭಂಡಾರಿ, ಯುವ ಕಾಂಗ್ರೆಸ್ ರಾಜ್ಯ ಕಾಂರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ , ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ , ಸತೀಶ್ ರೈ ನಿಡ್ಪಳ್ಳಿ, ಬ್ಲಾಕ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸುಪ್ರಿತ್ ಕಣ್ಣಾರಾಯ ಉಪಸ್ಥಿತರಿದ್ದರು. ಪಾಣಾಜೆ ವಲಯ ಅಧ್ಯಕ್ಷ ಸದಾನಂದ ಭರಣ್ಯ ಸ್ವಾಗತಿಸಿ, ಅಬೂಬಕ್ಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here