ಪುತ್ತೂರು: ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರು. ಅವರು ಭಾರತದ ಏಕತೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ರಾಷ್ಟ್ರೀಯತೆ, ಸಂಘಟನಾ ಕೌಶಲ್ಯ ಮತ್ತು ಸಮಾಜ ಸುಧಾರಣಾ ಪ್ರಯತ್ನಗಳು ಭಾರತದ ಸ್ವಾತಂತ್ರ್ಯ ಮತ್ತು ಏಕತೆಗೆ ಮಹತ್ವದ ಕೊಡುಗೆ ನೀಡಿವೆ. ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ೧೯೨೫ ರ ವಿಜಯದಶಮಿಯಂದು ಸ್ಥಾಪಿತವಾದ ಆರ್‌ಎಸ್‌ಎಸ್ , ಇಂದಿಗೆ ದೇಶದ ಬಲಿಷ್ಥ ಸಂಘಟನೆಯಾಗಿ ದೇಶಕ್ಕೆ ಉತ್ತಮ ಕಾರ್ಯಕರ್ತರನ್ನು, ಉತ್ತಮ ನೇತಾರರನ್ನು ಕೊಟ್ಟಿದೆ. ಈ ಸಂಘವು ಇಡೀ ರಾಷ್ಟ್ರವನ್ನು ಮೌಲ್ಯಾಧಾರಿತ, ವೈಭವಯುತ, ಸವಾಂಗೀಣ ಉನ್ನತಿಯ ದಾರಿಯಲ್ಲಿ ಕೊಂಡುಹೋಗುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಗಳ ಸಂಸ್ಕಾರ ಪರಿವೀಕ್ಷಣಾ ಪ್ರಮುಖರಾದ ಮೀನಾಕ್ಷಿ ಹೇಳಿದರು.
ನರೇಂದ್ರ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು, ಸ್ವಾತಂತ್ರ್ಯ ಹೋರಾಟಗಾರರು, ಶ್ರೇಷ್ಠ ಸಮಾಜಸೇವಕರು ಮತ್ತು ಸುಧಾರಕರಾದ ಡಾ.ಕೇಶವ ಬಲಿರಾಮ ಹೆಡ್ಗೆವಾರ್ ಇವರ ಕುರಿತ ವಿಶೇಷ ಉಪನ್ಯಾಸ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸವನ್ನುಉನ್ನತ ಶ್ರೇಣಿಯಲ್ಲಿಯೇ ಮುಂದುವರೆಸಿ, ನಂತರ ದೂರದ ಕಲ್ಕತ್ತಾಕ್ಕೆ ತೆರಳಿ ಅಲ್ಲಿ ವೈದ್ಯಕೀಯ ಪದವಿ ಪಡೆದಿರುತ್ತಾರೆ. ಆದ್ದರಿಂದಲೇ ಆರ್‌ಎಸ್‌ಎಸ್ ಸ್ವಯಂ ಸೇವಕರು ಅವರನ್ನು ಡಾಕ್ಟರ್ ಜೀ ಎಂದು ಕರೆಯುತ್ತಾರೆ. ಹತ್ತಾರು ಸ್ವಯಂ ಸೇವಕರು ಜಾತಿ ಬೇಧಗಳ ಹಂಗಿಲ್ಲದೇ, ಒಂದಾಗಿ ಆಟ, ವ್ಯಾಯಾಮದ ಜೊತೆ ದೇಶ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಚರ್ಚೆ ನಡೆಸುತ್ತಾ ಸಂಘ ಯಶಸ್ವಿಯಾದ ನಂತರ ಈ ರೀತಿಯ ಸಂಘ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ತನ್ನ ಶಾಖೆಯನ್ನು ಹೊಂದಿರಬೇಕು ಎಂಬ ಆಶಯದಿಂದ ಎಲ್ಲಾ ಕಡೆಯಲ್ಲೂ ವಿಸ್ತಾರವಾಗುತ್ತಾ ನೋಡ ನೋಡುತ್ತಿದ್ದಂತೆಯೇ ದೇಶಾದ್ಯಂತ ಸಾವಿರಾರು ಶಾಖೆಗಳಾಗಿ ವಿಸ್ತರಿಸಲ್ಪಡುತ್ತದೆ.
ಡಾ. ಹೆಡ್ಗೆವಾರ್ ಅವರ ಚಿಂತನೆಗಳಿಂದ ದೇಶಕ್ಕೆ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರು, ಸಾವಿರಾರು ಉತ್ತಮ ನೇತಾರರನ್ನು ನೀಡುತ್ತಾ ಬಂದಿದ್ದು ಇಂದು ರಾಷ್ಟ್ರೀಯವಾಗಿ ಮತ್ತು ಅಂತರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಂಘದ ನಿಲುವೇನು ಎಂಬುದರ ಬಗ್ಗೆ ಕೇಳುತ್ತಾರೆ ಎಂದರೆ, ಅಂತಹ ಸಂಘವನ್ನು ಸ್ಥಾಪನೆ ಮಾಡಿದ ಡಾ. ಕೇಶವ ಬಲಿರಾಮ ಹೆಡಗೇವಾರರ ಮೌಲ್ಯ, ಹಿರಿಮೆ ಮತ್ತು ಗರಿಮೆಯನ್ನು ತೋರಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಜೀವಿತಾ ಸ್ವಾಗತಿಸಿ ವಂದಿಸಿದರು.