ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ಇಚ್ಲಂಪಾಡಿ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಇಚ್ಲಂಪಾಡಿ ಬಿಲ್ಲವ ಸಂಘದ ಕಟ್ಟಡದಲ್ಲಿ ನಡೆಯಿತು.
ಅತಿಥಿಯಾಗಿ ಆಗಮಿಸಿದ ಪುತ್ತೂರು ತಾಲೂಕು ಬಿಲ್ಲವ ಸಮಿತಿ ಕೋಶಾಧಿಕಾರಿ ಮಹೇಶ್ ಚಂದ್ರ ಮಾತನಾಡಿ, ಬಿಲ್ಲವ ಸಂಘದ ಅಡಿಯಲ್ಲಿ ಒಂದಾಗುತ್ತಿರುವ ನಮಗೆ ಕೋಟಿ ಚೆನ್ನಯರು ಬದುಕು ಆದರ್ಶವಾಗಬೇಕು. ದುಶ್ಚಟಗಳಿಂದ ಅವನತಿಯತ್ತ ಸಾಗದೆ, ಸಂಘರ್ಷ ನಮ್ಮ ದಾರಿಯಾಗದೆ ಒಗ್ಗಟ್ಟು ನಮ್ಮ ಮೂಲ ಮಂತ್ರವಾಗಬೇಕು ಎಂದರು. ಬಿಲ್ಲವ ಗ್ರಾಮ ಸಮಿತಿ ಇಚ್ಲಂಪಾಡಿ ಇದರ ಅಧ್ಯಕ್ಷ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.



ಗೌರವಾಧ್ಯಕ್ಷ ಇಂದ್ರ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಬಿಲ್ಲವ ಸಂಘದ ಆಶ್ರಯದಲ್ಲಿ ಇಚ್ಲಂಪಾಡಿ ಬಿಲ್ಲವ ಸಂಘ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಮಕ್ಕಳು ವಿದ್ಯಾವಂತರಾಗಿ ಮುಂದಿನ ಪೀಳಿಗೆಗೆ ಸಂಘಟನೆಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಿತ್, ಹರ್ಷಿತ್, ಸಹನಾ, ಯಶ್ವಿತಾ, ಮೌಲ್ಯ, ಕೀರ್ತನ್ ಇವರನ್ನು ಗೌರವಿಸಲಾಯಿತು. ಅಂಗನವಾಡಿಯಿಂದ ೭ನೇ ತರಗತಿ ವರೆಗಿನ ಮಕ್ಕಳಿಗೆ ಕೊಡೆ ವಿತರಿಸಲಾಯಿತು.
ಬಾಲಕೃಷ್ಣ ಕೋಟೆಗುಡ್ಡೆ ವರದಿ ವಾಚಿಸಿ, ವಿನೋದ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ದೇವಿಪ್ರಸಾದ್ ಸ್ವಾಗತಿಸಿ, ವಿನೋದ್ ವಂದಿಸಿದರು. ಮೌಲ್ಯ ನಿರೂಪಿಸಿದರು. ವಿಜಯ ಮತ್ತು ಪ್ರಮೀಳಾ ಪ್ರಾರ್ಥಿಸಿದರು.