ಸರ್ವ ಭಕ್ತರು ಸೇರಿಕೊಂಡು ತಾಯಿಗೆ ಸ್ವರ್ಣ ಕವಚ ಸಮರ್ಪಿಸೋಣ: ಶಾಸಕ ಅಶೋಕ್ ರೈ
ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ದೇವಿಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಂದಾಜು 3 ಕೆ.ಜಿ. ತೂಕದ ಸ್ವರ್ಣ ಕವಚ ರಚಿಸಿ ಸಮರ್ಪಿಸಲು ನಿರ್ಧರಿಸಲಾಗಿರುವ ಹಿನ್ನಲೆಯಲ್ಲಿ ಭಕ್ತರೊಂದಿಗೆ ಸಮಾಲೋಚನಾ ಸಭೆ ಜು.13ರಂದು ದೇವಸ್ಥಾನದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿಯನ್ನೇ ಮುಖ್ಯ ಸಮಿತಿಯನ್ನಾಗಿ ಮುಂದುವರೆಸಿ ಉಪಸಮಿತಿಗಳನ್ನು ರಚಿಸಿ ಮುಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಿರ್ಣಯಿಸಲಾಯಿತು.

ಅಂದಾಜು ಪಟ್ಟಿ ತಯಾರಿ-ಅಶೋಕ್ ರೈ:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಅಶೋಕ್ ಕುಮಾರ್ ರೈ ಮಾತನಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದು 3 ವರ್ಷಗಳಾಗಿವೆ. ಬ್ರಹ್ಮಕಲಶೋತ್ಸವದ ಬಳಿಕ ದೇಗುಲದಲ್ಲಿ ವಾರ್ಷಿಕವಾಗಿ ನಡೆಯುವ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆದಿಲ್ಲ. ಈಗ ಹೊಸ ವ್ಯವಸ್ಥಾಪನಾ ಸಮಿತಿ ಬಂದಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ 23 ಲಕ್ಷ ರೂ. ಅನುದಾನ ಕೂಡ ಬಂದಿದೆ. ದೇಗುಲದಲ್ಲಿ ಬಹಳಷ್ಟು ಎಲ್ಲಾ ವ್ಯವಸ್ಥೆಗಳೂ ಇವೆ. ನಾವು ಸಾಮಾನ್ಯವಾಗಿ ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಿಸಿಕೊಂಡು ಸೇವೆ, ಪೂಜೆಗಳನ್ನು ಸಲ್ಲಿಸುತ್ತೇವೆ. ಆದರೆ ನಮ್ಮ ಸುಖ, ಸಂತೋಷದ ಸಮಯವನ್ನು ಕೂಡ ದೇವರ ಜೊತೆಗೆ ಹಂಚಿಕೊಳ್ಳಬೇಕು ಎನ್ನುವುದು ನಮ್ಮ ಪ್ರವೃತ್ತಿ ಆಗಬೇಕು. ನಾನು ಶಾಸಕನಾಗಿ ಅನೇಕ ದೇಗುಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವರ್ಣದ ಆಭರಣಗಳು, ವಸ್ತುಗಳಿಂದ ಕ್ಷೇತ್ರದ ದೇವರು ಕಂಗೊಳಿಸುವುದನ್ನು ಗಮನಿಸಿದ್ದೇನೆ. ಹೀಗಾಗಿ ತಾಯಿ ಮಹಿಷಮರ್ದಿನಿಗೆ ಸರ್ವ ಭಕ್ತರು ಸೇರಿಕೊಂಡು ಸ್ವರ್ಣ ಕವಚವನ್ನು ಸಮರ್ಪಿಸೋಣ ಎನ್ನುವುದು ನಮ್ಮ ಕಲ್ಪನೆ. ಇದಕ್ಕಾಗಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು ವಿಗ್ರಹದಲ್ಲಿ ಮಹಿಷನ ಭಾಗವನ್ನು ಬಿಟ್ಟು ಸ್ವರ್ಣ ಕವಚ ರಚಿಸುವುದಿದ್ದರೆ 1.75 ಕೋಟಿ ರೂ., ಮಹಿಷನ ಭಾಗವನ್ನು ಸೇರಿಸಿ ಚಿನ್ನದ ಕವಚ ನಿರ್ಮಿಸುವುದಿದ್ದರೆ 2.60 ಕೋಟಿ ರೂ.ಗಳ ಕೊಟೇಷನ್ ನೀಡಿದ್ದಾರೆ. ಕಳೆದ ಬಾರಿ ನಡೆದ ತುರ್ತು ಸಭೆಯಲ್ಲಿ ಹಲವಾರು ಮಂದಿ ದೇಣಿಗೆಯನ್ನು ಘೋಷಣೆ ಮಾಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಕೂಡ ಒಂದಷ್ಟು ಅನುದಾನ ಲಭಿಸಲಿದೆ. ಒಬ್ಬೊಬ್ಬರೇ ಕೈಯಿಂದ ದುಡ್ಡು ಹಾಕಿ ಈ ಕೆಲಸ ಆಗಬಾರದು. ಇದರಲ್ಲಿ ಸರ್ವ ಭಕ್ತರ ಕೊಡುಗೆ ಇರಬೇಕು ಎನ್ನುವುದು ನಮ್ಮ ಚಿಂತನೆ. ಎಲ್ಲರ ಕೊಡುಗೆಯೂ ಸೇರಿದಾಗ ನಮ್ಮದು ಎನ್ನುವ ಭಾವನೆ ಬರುತ್ತದೆ. ಹೀಗಾಗಿ ಎಲ್ಲಾ ಭಕ್ತರ ಮನೆಗಳಿಗೆ ತೆರಳಿ ಅವರಿಗೆ ರಶೀದಿ ನೀಡಿ ವಾಗ್ದಾನ ಪಡೆಯುವ ಕೆಲಸ ಆಗಬೇಕು. ಎಲ್ಲರಿಗೂ ಈ ವಿಚಾರ ತಲುಪುವ ವ್ಯವಸ್ಥೆ ಮಾಡಬೇಕು. ನಾವು ದೇವರಿಗೆ ನೀಡುವುದು ದೇವರಿಗೆ ಬೇಕೆಂದಲ್ಲ, ದೇವರಿಗೆ ಸಮರ್ಪಿಸಿ ನಮಗೆ ಇನ್ನಷ್ಟು ಸಂಪತ್ತು, ಸಮೃದ್ಧಿ ಆರೋಗ್ಯವನ್ನು ನೀಡಿ ಎನ್ನುವ ಪ್ರಾರ್ಥನೆಗಾಗಿ. ನಾವು ಕೊಟ್ಟದ್ದಕ್ಕೆ ಪ್ರತಿಯಾಗಿ ದೇವರು ನಮಗೆ ನೀಡುತ್ತಾ ಇರುತ್ತಾರೆ. ಮನಸ್ಸು ಮಾಡಿದರೆ ಏನನ್ನೂ ಮಾಡಬಹುದು. ಎಲ್ಲರೂ ಒಗ್ಗಟ್ಟಾಗಿ ಈ ಮಹತ್ತರ ಯೋಜನೆಯನ್ನು ಸುಮಾರು 3 ಕೆ.ಜಿ ಚಿನ್ನದ ಕವಚವನ್ನು ತಾಯಿಗೆ ಸಮರ್ಪಿಸೋಣ. ಇಡೀ ದ.ಕ. ಜಿಲ್ಲೆಯೇ ಕ್ಷೇತ್ರಕ್ಕೆ ಆಗಮಿಸುವಂತೆ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಹೇಳಿದರು.
ಹನಿ ಹನಿ ಕೂಡಿದರೆ ಹಳ್ಳ-ನಿರಂಜನ ರೈ:
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಅವರು, ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಪ್ರತೀ ಭಕ್ತರ ಕೊಡುಗೆ ಈ ಯೋಜನೆಯಲ್ಲಿ ಇರಬೇಕು ಎನ್ನುವುದು ನಮ್ಮ ಚಿಂತನೆ. ಇದಕ್ಕೆ ಭಕ್ತಾದಿಗಳು ಶಕ್ತಿ ತುಂಬಬೇಕು. ಈ ಕಾರ್ಯಕ್ಕೆ ಮುಂದಿನ ನವರಾತ್ರಿವರೆಗೆ ಕಾಲಾವಕಾಶವಿದ್ದು, ಗ್ರಾಮವನ್ನು ವಿಭಾಗವಾರು ವಿಂಗಡಣೆ ಮಾಡಿ ಸಮಿತಿಗಳನ್ನು ರಚಿಸಿಕೊಂಡು ಗ್ರಾಮದೊಳಗೆ ಮತ್ತು ಹೊರವಲಯದ ಸಮಿತಿಗಳನ್ನು ರಚಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಯೋಜನೆ ಹಾಕಿಕೊಂಡಿದ್ದೇವೆ. ಮಹಾಸಂಕಲ್ಪ ರಶೀದಿಯನ್ನು ಮಾಡಿ, ಭಕ್ತರಿಗೆ ಈ ವಿಚಾರದ ಬಗ್ಗೆ ಮನವರಿಕೆ ಮಾಡಿ, ಒಂದೇ ಸಲಕ್ಕೆ ಮೊತ್ತವನ್ನು ನೀಡಲು ಕಷ್ಟವಾಗುವವರಿಗೆ ಹಂತ ಹಂತದಲ್ಲಿ ದೇಣಿಗೆ ಸಂಗ್ರಹಕ್ಕೆ ಚಿಂತನೆ ನಡೆಸಲಾಗಿದೆ. ಕ್ಷೇತ್ರದ ಬ್ರಹ್ಮಕಲಶೋತ್ಸವವನ್ನು ನಾವೆಲ್ಲ ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನಡೆಸಿದ್ದೇವೆ. ಇದೀಗ ಈ ಭಾಗ್ಯ ನಮಗೆ ಲಭಿಸಿದೆ. ದೇವರ ಅನುಗ್ರಹ, ಶಾಸಕರ ಸಹಕಾರ ಮತ್ತು ಭಕ್ತರ ಪ್ರೋತ್ಸಾಹದಿಂದ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಸಮಿತಿ ರಚನೆ:
ಸ್ವರ್ಣಕವಚ ಸಮರ್ಪಣೆಯ ಯೋಜನೆಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಅಧ್ಯಕ್ಷರಾಗಿರುವ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮೂಲಕವೇ ಮುಂದುವರೆಸಲು ನಿರ್ಧರಿಸಲಾಗಿದೆ. ಉಳಿದಂತೆ ಕಾರ್ಯ ನಿರ್ವಹಣೆಗೆ ಕೋಡಿಂಬಾಡಿ ಗ್ರಾಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಾಲ್ಕು ಗ್ರಾಮ ಸಮಿತಿ, ಹೊರವಲಯ ಸಮಿತಿ ಮತ್ತು ಸಾಮಾಜಿಕ ಜಾಲತಾಣ ಸಮಿತಿ ಮತ್ತು ಕಾರ್ಯಾಲಯ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಪದಾಧಿಕಾರಿಗಳಿಗೆ ಶಾಸಕರು ಹೂಗುಚ್ಛ ನೀಡಿ ಅಭಿನಂದಿಸಿದರು.
ದಾನಿಗಳಿಂದ ಘೋಷಣೆ:
*ಸ್ವರ್ಣ ಕವಚ ಸಮರ್ಪಣೆಯ ಹಿನ್ನೆಲೆಯಲ್ಲಿ ನಡೆದ ಪ್ರಥಮ ಸಭೆಯಲ್ಲೇ ದಾನಿಗಳು ದೇಣಿಗೆ ಘೋಷಣೆ ಮಾಡಿದ್ದಾರೆ. ಅಶೋಕ್ ಕುಮಾರ್ ರೈಯವರು 35 ಲಕ್ಷ ರೂ., ಕಂಬಳ ಕೋಣಗಳ ಮಾಲಕ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿಯವರು 1 ಪವನ್ ಚಿನ್ನ, ಉಲ್ಲಾಸ್ ಕೋಟ್ಯಾನ್ 1 ಲಕ್ಷ ರೂ., ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ 1 ಪವನ್ ಚಿನ್ನ, ಮುರಳೀಧರ ರೈ 5 ಗ್ರಾಂ ಚಿನ್ನ, ರಾಜೀವ ಶೆಟ್ಟಿ ಕೇದಗೆ 1 ಲಕ್ಷ, ಸದಾಶಿವ ಶೆಟ್ಟಿ ಮಠಂತಬೆಟ್ಟು 1 ಗ್ರಾಂ ಚಿನ್ನ, ಪ್ರಭಾಕರ ಸಾಲ್ಯಾನ್ 50 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು 50 ಸಾವಿರ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು.
ಹಲವರು ಭಾಗಿ:
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವದಾಸ ಗೌಡ ಪಿಲಿಗುಂಡ, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕುಮಾರನಾಥ ಎಸ್. ಪಲ್ಲತ್ತಾರು, ಸತೀಶ್ ನಾಯಕ್ ಮೋನಡ್ಕ, ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ವ್ಯವಸ್ಥಾಪಕ ಸಂತೋಷ್ ಕುಮಾರ್ ರೈ, ದೇವಸ್ಥಾನದ ಮಹಿಳಾ ಸಮಿತಿ ಗೌರವಾಧ್ಯಕ್ಷೆ ಸುಮಾ ಎ. ರೈ, ಮಹಿಳಾ ಸಮಿತಿ ಅಧ್ಯಕ್ಷೆ ರಶ್ಮಿ ಎನ್. ರೈ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಎ. ಪೂಜಾರಿ, ಉಪಾಧ್ಯಕ್ಷ ಜಯಪ್ರಕಾಶ ಬದಿನಾರು, ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಸದಾಶಿವ ರೈ, ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ವಾರಿಸೇನ ಜೈನ್, ವಿಕ್ರಮ್ ಶೆಟ್ಟಿ ಅಂತರ ಶಿವಪ್ರಸಾದ್ ರೈ, ರಮೇಶ್ ನಾಯಕ್ ನಿಡ್ಯ, ಸದಾಶಿವ ಸಾಮಾನಿ ಸಂಪಿಗೆದಡಿ, ಶೇಖರ ಪೂಜಾರಿ ಜೇಡರಪಾಲು, ಪೂರ್ಣಿಮಾ ಎಸ್. ಶೆಟ್ಟಿ ಹೆಗ್ಡೆಹಿತ್ಲು ಸಹಿತ ಹಲವರು ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯಾಲಯ ಸಿಬ್ಬಂದಿಗಳಾದ ಪ್ರತಿಮಾ ಮೋನಡ್ಕ ಮತ್ತು ಪವಿತ್ರಾ ಸೇಡಿಯಾಪು ಸಹಕರಿಸಿದರು.
ಮನೆ ಮನೆಗಳಿಗೆ ತೆರಳಿ ಸಂಗ್ರಹ: ಅಶೋಕ್ ರೈ

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯಕ್ಕೆ ಇಡೀ ರಾಜ್ಯ ಮಾತ್ರವಲ್ಲ ಹೊರ ರಾಜ್ಯದಿಂದ ಕೂಡ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ನ್ಯಾಯಾಧೀಶರು, ಉದ್ಯಮಿಗಳು ಬಂದು ಪ್ರಸಾದ ಸ್ವೀಕರಿಸಿ ದೇಣಿಗೆ ನೀಡಿ ಹೋಗುತ್ತಿರುತ್ತಾರೆ. ತಾಯಿ ಮಹಿಷಮರ್ದಿನಿಯನ್ನು ಸ್ವರ್ಣಕವಚ ಭೂಷಿತೆಯಾಗಿ ನೋಡಿ ಸಂತೋಷಪಡಬೇಕು ಎನ್ನುವ ಕಲ್ಪನೆಯಿತ್ತು. ನಾನೊಬ್ಬನೇ ಮಾಡುವುದು ಸರಿ ಕಾಣದು. ಹೀಗಾಗಿ ವ್ಯವಸ್ಥಾಪನಾ ಸಮಿತಿಯವರು, ಊರ ಪರವೂರ ಭಕ್ತಾದಿಗಳು ಸೇರಿಕೊಂಡು ಸುಮಾರು ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ 3 ಕೆಜಿ ಚಿನ್ನದಲ್ಲಿ ಸ್ವರ್ಣಕವಚ ರಚಿಸಬೇಕೆಂದು ಮುಂದಾಗಿದ್ದೇವೆ. ಈಗಾಗಲೇ ಹಲವಾರು ದಾನಿಗಳು ಸುಮಾರು 1 ಕೋಟಿಯಷ್ಟು ದೇಣಿಗೆಯ ವಾಗ್ದಾನ ನೀಡಿದ್ದಾರೆ. ಇನ್ನು 2 ಕೋಟಿ ರೂ.ಗಳನ್ನು ಭಕ್ತರ ಮನೆ ಮನೆಗೆ ತೆರಳಿ ಸಂಗ್ರಹಿಸುವ ಚಿಂತನೆ ಇದೆ. ಮುಂದಿನ ವರ್ಷದ ನವರಾತ್ರಿಯೊಳಗೆ ತಾಯಿಗೆ ಸಮರ್ಪಿಸಬೇಕು. ಬ್ರಹ್ಮಕಲಶೋತ್ಸವದ ರೀತಿಯಲ್ಲಿ ಮಾಡಿ ಇಡೀ ಜಿಲ್ಲೆಯ ಭಕ್ತರನ್ನು ಭಾಗವಹಿಸುವಂತೆ ಮಾಡಬೇಕು ಎನ್ನುವುದು ನಮ್ಮ ಚಿಂತನೆ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಯಾರಿಗೆ ದೇಣಿಗೆ ನೀಡಲು ಇಚ್ಛೆಯಿದೆಯೋ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಬಹುದು.
ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಶಾಸಕರು, ಅಧ್ಯಕ್ಷರು- ಜೀರ್ಣೋದ್ಧಾರ ಸಮಿತಿ
ಮಹಾ ಸಂಕಲ್ಪ ರಶೀದಿ: ನಿರಂಜನ ರೈ

ಶಾಸಕ ಅಶೋಕ್ ರೈಗಳ ಸ್ಫೂರ್ತಿ ಮತ್ತು ಊರ ಪರವೂರ ಧರ್ಮ ಬಂಧುಗಳ ಸಹಕಾರದಿಂದ ತಾಯಿಗೆ ಸ್ವರ್ಣದ ಕವಚ ಸಮರ್ಪಿಸಬೇಕು ಎನ್ನುವ ಇರಾದೆ ನಮ್ಮದು. ಪ್ರತಿಯೊಬ್ಬರ ಕಾಣಿಕೆ ಇದರಲ್ಲಿ ಇರಬೇಕು ಎನ್ನುವುದು ನಮ್ಮ ಚಿಂತನೆ. ನಮ್ಮ ಸಮಿತಿಗಳ ಮೂಲಕ ಭಕ್ತರ ಮನೆಮನೆಗೆ ಮಹಾ ಸಂಕಲ್ಪ ರಶೀದಿಯ ಜೊತೆಗೆ ನಾವು ತೆರಳುತ್ತೇವೆ. ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೆ ಎಲ್ಲರ ಮನೆ ಮನೆಗೆ ಭೇಟಿ ನೀಡಲಿದ್ದೇವೆ. ಭಕ್ತರು ಸಂಕಲ್ಪ ಮಾಡಿದ ದೇಣಿಗೆಯ ಮೊತ್ತವನ್ನು ನೀಡಲು ಒಂದು ವರ್ಷಗಳ ಕಾಲಾವಕಾಶ ಇದೆ. ಆದರೆ 3 ತಿಂಗಳಲ್ಲಿ ಭಕ್ತರು ತಾವು ಸಂಕಲ್ಪ ಮಾಡಿದ ಮೊತ್ತದ ಶೇ.30ರಷ್ಟು ದೇಣಿಗೆಯನ್ನು ನೀಡಿದರೆ ನಮಗೆ ಅನುಕೂಲವಾಗುತ್ತದೆ. ಮೂರು ತಿಂಗಳಿಗೊಮ್ಮೆ ದೇಣಿಗೆಯ ಮೊತ್ತವನ್ನು ನೀಡಬೇಕು. ಎಲ್ಲ ಭಕ್ತರ ಭಕ್ತಿಯ ಪ್ರತೀಕವಾಗಿ ಇದು ಅರ್ಪಣೆಯಾಗಬೇಕು ಎನ್ನುವುದು ನಮ್ಮ ಆಶಯ.
ನಿರಂಜನ ರೈ ಮಠಂತಬೆಟ್ಟು, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಮಹಿಷಮರ್ದಿನಿ ದೇವಸ್ಥಾನ, ಮಠಂತಬೆಟ್ಟು