ಪುತ್ತೂರು: ಬನ್ನೂರಿನ ಅಲುಂಬುಡದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ತರಗತಿಯನ್ನು ಉದ್ಘಾಟಿಸಲಾಯಿತು.
ಕನ್ನಡ, ತುಳು ಸಿನಿಮಾ ಹಾಗೂ ಕಿರುತೆರೆ ನಟರಾಗಿರುವ ಪುತ್ತೂರಿನ ಪ್ರಸನ್ನ ಬಾಗಿನ ಬಪ್ಪಳಿಗೆ ರವರು ಯಕ್ಷಗಾನ ತರಗತಿಯನ್ನು ಉದ್ಘಾಟಿಸಿ ಮಾತನಾಡಿ ಇಂದು ಯಕ್ಷಗಾನವು ವಿಶ್ವಮಾನ್ಯವಾಗಿದೆ. ಮಕ್ಕಳಲ್ಲಿ ಎಳವೆಯಿಂದಲೇ ಇದರ ಕಲಿಕೆ ಆರಂಭವಾದರೆ ಅವರು ಮುಂದಕ್ಕೆ ಈ ಕ್ಷೇತ್ರದಲ್ಲಿ ಸಮರ್ಥವಾಗಿ ಬೆಳೆಯಲು ಸಾಧ್ಯ, ಇದೊಂದು ದೃಶ್ಯ ಹಾಗೂ ಶ್ರಾವ್ಯಕ್ಕೆ ಸಂಬಂಧಪಟ್ಟ ಕಲೆಯಾಗಿದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಆಸಕ್ತಿಯಿಂದ ಕಲಿತು ಮುಂದಕ್ಕೆ ಪ್ರತಿಭಾನ್ವಿತ ಕಲಾವಿದರಾಗಬೇಕು ಹಾಗೂ ಇದರ ಅಭಿರುಚಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.
ಯಕ್ಷಗಾನ ಗುರು ಬಾಲಕೃಷ್ಣ ಉಡ್ಡಂಗಳ ರವರು ಮಕ್ಕಳ ಕಲಿಕೆ ಬಗ್ಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಯಕ್ಷಗಾನ ಭಾಗವತ ಸತೀಶ್ ಇರ್ದೆ ಅವರು ಶಾಲೆ ಹಾಗೂ ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಮಾಡೋಣ ಎಂದು ಶುಭ ಕೋರಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಎ ವಿ ನಾರಾಯಣ, ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಅಮರ್ನಾಥ್ ರವರು ಸ್ವಾಗತಿಸಿ, ಶಿಕ್ಷಕಿ ಹರ್ಷಿತ ವಂದಿಸಿದರು. ಶಿಕ್ಷಕಿ ಸುಚಿತಾ ರವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.