ಪುತ್ತೂರು: ಬಿಜೆಪಿ ವತಿಯಿಂದ ನಗರ ಮಂಡಲದ ಬೂತ್ ಸಂಖ್ಯೆ 118ರ ವಾರ್ಡ್ ಸಂಖ್ಯೆ 19ರಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರು ಹಾಗೂ ನೃತ್ಯ ಗುರು ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು ಅವರನ್ನು ನೃತ್ಯ ಕ್ಷೇತ್ರದ ಅಪೂರ್ವ ಸೇವೆಗಾಗಿ ಗೌರವಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರ ಸಭಾ ಸದಸ್ಯೆಯಾಗಿದ್ದು ವಿದ್ವಾನ್ ದೀಪಕ್ ಕುಮಾರ್ ಇವರ ಶಿಷ್ಯೆಯೂ ಆಗಿರುವ ವಿದ್ಯಾಗೌರಿ ಅವರು ಗುರುವಂದನೆ ಮಾಡಿದರು.
ವಿದ್ವಾನ್ ಬಿ.ದೀಪಕ್ ಕುಮಾರ್ ಕಳೆದ 34 ವರ್ಷಗಳಿಂದ ಅಕಾಡೆಮಿಯ ವಿವಿಧ ಶಾಖೆ ಹಾಗೂ ಅನೇಕ ಸಂಸ್ಥೆಗಳ ಮೂಲಕ ಸುಮಾರು ಮೂವತ್ತು ಸಾವಿರ ಕಲಿಕಾ ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸಿದ್ದು, ಪ್ರಸ್ತುತ ಐನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ವಾನ್ ದೀಪಕ್ ಕುಮಾರ್ ಇವರಿಗೆ, ವ್ಯಾಸ ಮುನಿಯ ಜನ್ಮದಿನಾಚರಣೆಯ ನೆನಪಿಗಾಗಿ ಭಗವದ್ಗೀತೆಯನ್ನು ಕಾಣಿಕೆಯಾಗಿ ನೀಡಲಾಯಿತು. ಬಿಜೆಪಿ ವಾರ್ಡ್ ಹಾಗೂ ಬೂತ್‌ನ ಸದಸ್ಯರು, ಸ್ಥಳೀಯ ನಿವಾಸಿಗಳು, ದೀಪಕ್ ಕುಮಾರ್ ಅವರ ತಾಯಿ ಶಶಿಪ್ರಭಾ, ಪತ್ನಿ ವಿದುಷಿ ಪ್ರೀತಿಕಲಾ, ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಗರಸಭೆ ಮಾಜಿ ಉಪಾಧ್ಯಕ್ಷ ವಿನಯ್ ಭಂಡಾರಿ ವಂದಿಸಿದರು.