
ಪುತ್ತೂರು: ಪರಿಶಿಷ್ಟ ಪಂಗಡಕ್ಕೆ ಸೇರಿದ ಬಲ್ನಾಡು ಗ್ರಾಮದ ಕೊಂಕೆ ಅಜಕಲ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 6 ಮನೆಗಳು ಮತ್ತು ಇತರೆ 1 ಮನೆಗೆ ರಸ್ತೆ ನಿರ್ಮಾಣ ಮಾಡಿಕೊಡುವ ಕುರಿತು ಹಲವು ಮನವಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನೀಡಿ ಆಗಿದೆ. ಯಾವುದೇ ಸ್ಪಂದನೆ ಇಲ್ಲ. ಹಾಗಾಗಿ ಇನ್ನು ಒಂದು ವಾರಗೊಳಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ- ಕರ್ನಾಟಕ ಇದರ ನೇತೃತ್ವದಲ್ಲಿ ರಸ್ತೆ ಮಾಡಿ ಕೊಡಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಲ್ನಾಡು ಕೊಂಕೆ ಅಜಕಲದಲ್ಲಿ 7 ಮನೆಗಳಾದ ಚಂದ್ರಶೇಖರ್, ರೇಖಾ, ಕೊರಗಪ್ಪ, ವೆಂಕಪ್ಪ, ಐತ್ತಪ್ಪ ನಾಯ್ಕ, ಕೃಷ್ಣ ನಾಯ್ಕ, ಸದಾನಂದ ಮತ್ತು ರಮ್ಯಶ್ರೀ ಯವರ ಮನೆಗೆ ಹೋಗಲು ಕಾಲು ದಾರಿ ಮಾತ್ರ ಇರುವುದು. ಸುಮಾರು ಒಂದೂವರೆ ಕಿಲೋ ಮೀಟರ್ ಅವರು ಮನೆಗೆ ಯಾವುದೇ ಸಾಮಾಗ್ರಿಗಳನ್ನು ಕೊಂಡೊಯ್ಯಲು ಹರಸಾಹಸ ಪಡೆಯಬೇಕಾಗಿದೆ. ಸಂಪರ್ಕ ರಸ್ತೆಯಿಲ್ಲದೆ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇದೆ. ಈ ನಡುವೆ ದಾರಿ ಮಧ್ಯೆ ತೋಡು ಇದ್ದು, ಮಳೆಗಾಲದಲ್ಲಿ ಶಾಲಾ ಮಕ್ಕಳನ್ನು ತೋಡು ದಾಟಿಸುವುದೇ ದೊಡ್ಡ ಚಿಂತೆಯಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೆ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ಇತ್ತೀಚೆಗೆ ಇರ್ದೆಯಲ್ಲಿ ಕಾಲೋನಿಗೆ ರಸ್ತೆ ನಿರ್ಮಾಣ ಮಾಡಿಕೊಟ್ಟಂತೆ ಇಲ್ಲಿಯೂ ರಸ್ತೆ ಸಂಪರ್ಕ ಮಾಡಿಕೊಡಲಾಗುವುದು. ನನ್ನ ಮೇಲೆ ಕೇಸ್ ಆದರೂ ತೊಂದರೆ ಇಲ್ಲ. ಮುಂದಿನ ದಿನ ಚುನಾವಣೆಯ ಸಂದರ್ಭ ಆ ಭಾಗದ ಕಾಲೋನಿಯಿಂದ ಚುನಾವಣೆಗೆ ಬಹಿಷ್ಕಾರ ಹಾಕಲಾಗುವುದು. ರಸ್ತೆ ಸಂಪರ್ಕ ಕೆಲಸ ಮಾಡುವ ಸಂದರ್ಭ ಅಹಿತಕರ ಘಟನೆ ನಡೆದರೆ ಅದಕ್ಕೆ ಕಂದಾಯ ಅಧಿಕಾರಿಗಳೇ ಹೊಣೆ ಎಂದರು. ಮುಂದಿನ ತಿಂಗಳು ದೊಡ್ಡ ಮಟ್ಟದ ಜಾಥಾ ಮಾಡುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆಯನ್ನೂ ಹಾಕಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್ ತಿಂಗಳಾಡಿ, ರಮ್ಯಶ್ರೀ, ಚಂದ್ರಶೇಖರ್, ರೇಖಾ ಎ ಉಪಸ್ಥಿತರಿದ್ದರು.