ಕೃಷಿಕರು ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕು- ಶಾಸಕ ಅಶೋಕ್ ರೈ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೃಷಿಯನ್ನೇ ನಂಬಿಕೊಂಡ ಕೃಷಿಕರಿದ್ದಾರೆ. ಆದರೆ ಅಡಿಕೆ ಕೃಷಿಯೊಂದಿಗೆ ಮೀನುಗಾರಿಕೆಯನ್ನು ಕೂಡ ನಡೆಸಿ ಲಾಭಗಳಿಸಬಹುದು. ಕೃಷಿಕರು ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಒಳನಾಡು ಜಲಕೃಷಿ ಪ್ರಾತ್ಯಕ್ಷಿಕೆಗಾಗಿ ಮೀನುಗಾರಿಕಾ ಇಲಾಖೆಯಿಂದ ನೀಡಲಾದ ಉಚಿತ ಮೀನು ಮರಿ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮೀನು, ಕೋಳಿ ಸಾಕಾಣಿಕೆಯಿಂದ ಆಹಾರ ಅಲ್ಲದೆ ಲಾಭ ಗಳಿಸಲು ಸಾಧ್ಯ. ಇಂದು ನದಿ, ಹೊಳೆಯಲ್ಲಿ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಮೀನಿನ ಕೊರತೆ ಕಾಣುತ್ತಿದೆ. ನದಿಗಳಿಗೆ ಸ್ಫೋಟಕ ಬಳಸಿ ಮೀನು ಸಾಯಿಸುವವರನ್ನು ಸಾರ್ವಜನಿಕರು ವಿರೋಧ ಮಾಡಬೇಕು. ಮೀನುಗಾರಿಕಾ ಇಲಾಖೆಯಿಂದ ಇಂದು ೫೦೦ ಮೀನುಗಳನ್ನು ವಿತರಿಸಲಾಗಿದೆ. ಕೃಷಿಕರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಸಕರು ಫಲಾನುಭವಿ ಮೀನುಗಾರರಿಗೆ ಸವಲತ್ತು ಹಾಗೂ ಮೀನು ಕೃಷಿಕರಿಗೆ ಉಚಿತ ಮೀನು ಮರಿ ವಿತರಿಸಿದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
30 ಫಲಾನುಭವಿಗಳಿಗೆ 15 ಸಾವಿರ ಮೀನು ಮರಿ ವಿತರಣೆ
ಮೀನುಗಾರಿಕಾ ಇಲಾಖೆಗೆ ಬೇಡಿಕೆ ಸಲ್ಲಿಸಿರುವ 30 ಮೀನು ಕೃಷಿಕರಿಗೆ ಒಟ್ಟು 15 ಸಾವಿರ ಮೀನು ಮರಿ ವಿತರಿಸಲಾಯಿತು. ಕಾಟ್ಲಾ ಮತ್ತು ರೋಹೋ ಜಾತಿಯ 500 ಮೀನು ಮರಿಗಳನ್ನು 30 ಮಂದಿಗೆ ಉಚಿತವಾಗಿ ಶಾಸಕರು ವಿತರಿಸಿದರು. ಪರಿಶಿಷ್ಟ ಜಾತಿಯ ಇಬ್ಬರು ಫಲಾನುಭವಿಗಳಿಗೆ ಮೀನುಗಾರಿಕೆಯ ಸಲಕರಣೆ ವಿತರಿಸಲಾಯಿತು.